ರಾಯ್ಪುರ: ವ್ಯಾಲೈಂಟೈನ್ಸ್ ಡೇ ಸಮೀಪದ ಮೊದಲೇ ಘೋರ ದುರಂತವೊಂದು ನಡೆದುಹೋಗಿದೆ. ಹೌದು ಈ ವಾರ ಪ್ರೇಮಿಗಳ ವಾರವೆಂಬಂತೆ ಪ್ರತಿ ದಿನ ಒಂದೊಂದು ಡೇ ಸಂಭ್ರಮಿಸುವ ಪ್ರೇಮಿಗಳು ಪ್ರೀತಿಯನ್ನು ಗಟ್ಟಿಮಾಡಿಕೊಳ್ಳುತ್ತಾರೆ ಅದೇ ರೀತಿ ಇಲ್ಲೊಬ್ಬ ಪಾಗಲ್ ಪ್ರೇಮಿ ಪ್ರಾಮಿಸ್ ಡೇ ಅಂದು ತಾನು ಮಾಡಿದ ಪ್ರೀತಿಯ ನಿವೇದನೆಯನ್ನು ಒಪ್ಪದ ಯುವತಿಯನ್ನು ಗುಂಡಿಟ್ಟು ಕೊಂದಿರುವ ಘಟನೆ ಛತ್ತೀಸಗಢದ ಮಹಾಸಮುಂದ್ ನಲ್ಲಿ ನಡೆದಿದೆ.
ರೂಪಾ ಮತ್ತು ಚಂದ್ರಶೇಖರ್ ಮೊದಲನಿಂದಲೂ ಪರಿಚಯಸ್ಥರಾಗಿದ್ದರು. ರೂಪಾ, ಚಂದ್ರಶೇಖರ್ ನನ್ನು ಸ್ನೇಹಿತನಂತೆ ಭಾವಿಸಿದ್ದಳು. ಆದರೆ ಚಂದ್ರಶೇಖರ್ ಆಕೆಯನ್ನು ಪ್ರೀತಿಸುತ್ತಿದ್ದನಂತೆ. ಪ್ರೀತಿಯನ್ನು ಹೇಳಿಕೊಳ್ಳಲು ಸರಿಯಾದ ದಿನಕ್ಕಾಗಿ ಕಾದಿದ್ದ ಆತ, ಪ್ರಾಮಿಸ್ ಡೇ (ಫೆಬ್ರವರಿ 12) ಅಂದು ಪ್ರೀತಿ ಹೇಳಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ಅದರಂತೆ ಆ ದಿನ ರೂಪಾಗಾಗಿ ಕಾದು ಕುಳಿತಿದ್ದಾನೆ.
ಶುಕ್ರವಾರದಂದು ರೂಪಾ ತನ್ನ ಸೋದರಿ ಹೇಮಲತಾ ಜತೆ ಔಷಧ ಕೊಳ್ಳಲೆಂದು ಮಾರುಕಟ್ಟೆಗೆ ಬಂದಿದ್ದಾಳೆ. ಆಕೆಗಾಗೇ ಕಾದು ಕುಳಿತಿದ್ದ ಚಂದ್ರಶೇಖರ್, ತನ್ನ ಇಬ್ಬರು ಸ್ನೇಹಿತರೊಂದಿಗೆ ಆಕೆಯ ಬಳಿ ಬಂದಿದ್ದಾನೆ. ನಾನು ನಿನ್ನ ಪ್ರೀತಿಸುತ್ತೇನೆ ಎಂದು ಹೇಳಿದ್ದಾನೆ. ಆದರೆ ರೂಪಾ ಆ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ. ಇದರಿಂದಾಗಿ ಸಿಟ್ಟಿಗೆದ್ದ ಚಂದ್ರಶೇಖರ್ ತನ್ನ ಬಳಿ ಇದ್ದ ಪಿಸ್ತೂಲನ್ನು ಹೊರ ತೆಗೆದು, ರೂಪಾಳ ಮೇಲೆ ಗುಂಡು ಹಾರಿಸಿದ್ದಾನೆ.
ಗುಂಡಿನ ಹೊಡೆತಕ್ಕೆ ರೂಪಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಅದನ್ನು ಕಂಡು ಭಯಗೊಂಡ ಚಂದ್ರಶೇಖರ್ ಅಲ್ಲಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆರೋಪಿಯೇ ಬಂದು ಪೊಲೀಸರ ಎದುರು ಶರಣಾಗಿದ್ದಾನೆ.
PublicNext
13/02/2021 07:06 pm