ರಾಯ್ಪುರ: ಸಿಆರ್‌ಪಿಎಫ್ ಯೋಧನೋರ್ವ ತನ್ನ ಸಹೋದ್ಯೋಗಿಗೆ ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ಛತ್ತೀಸಗಡದ ಬಸ್ತಾರ್ ಜಿಲ್ಲೆಯ ಅರೆಸೈನಿಕ ಪಡೆಯ ಶಿಬಿರದಲ್ಲಿ ಇಂದು ನಡೆದಿದೆ. ಈ ಘಟನೆಯಲ್ಲಿ ಮತ್ತೋರ್ವ ಯೋಧ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸಿಆರ್‌ಪಿಎಫ್ ಪೇದೆ ಪ್ರಮೋದ್ ಕುಮಾರ್ ಸಾರಿ (27) ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಪೇದೆ ಸಂತೋಷ್ ವಾಚಮ್ (26) ಗಾಯಗೊಂಡಿದ್ದಾರೆ. ಕೆಸ್ಲೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಡ್ವಾ ಗ್ರಾಮದಲ್ಲಿರುವ ಸಿಆರ್‌ಪಿಎಫ್‌ನ 241ನೇ 'ಬಸ್ತಾರಿಯಾ' ಬೆಟಾಲಿಯನ್‌ನ ಶಿಬಿರದಲ್ಲಿ ಬೆಳಿಗ್ಗೆ 8 ಗಂಟೆಗೆ ಈ ಘಟನೆ ಸಂಭವಿಸಿದೆ
ಯೋಧ ಗಿರೀಶ್ ಕುಮಾರ್ (25) ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ಶಿಬಿರದ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಸಹೋದ್ಯೋಗಿಯಿಂದ ಬಂದೂಕನ್ನು ಕಿತ್ತುಕೊಂಡು ಪ್ರಮೋದ್ ಹಾಗೂ ಸಂತೋಷ್ ಅವರಿಗೆ ಶೂಟ್ ಮಾಡಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡಿದ್ದಾನೆ.
ತೀವ್ರವಾಗಿ ಗಾಯಗೊಂಡ ಇಬ್ಬರು ಸಿಬ್ಬಂದಿಯನ್ನು ಜಗದಲ್‌ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ರಾಯ್‌ಪುರ ದಾಖಲಿಸಲು ಸಿದ್ಧತೆ ನಡೆಸಲಾಗಿದೆ. ಗಿರೀಶ್ ಯಾಕೆ ಗುಂಡಿನ ದಾಳಿ ನಡೆಸಿದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
PublicNext
29/01/2021 01:01 pm