ಬೆಂಗಳೂರು: ಮ್ಯಾಟ್ರಿಮೊನಿ ಮೂಲಕ ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರನ್ನ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಶಿಕ್ಷಕಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕವಿತಾ ಹನಿಟ್ರ್ಯಾಪ್ ದಂಧೆಯಲ್ಲಿ ಸಿಕ್ಕಿಬಿದ್ದ ಶಿಕ್ಷಕಿ. ಆರೋಪಿ ಕವಿತಾ ಅನೇಕ ವ್ಯಕ್ತಿಗಳಿಗೆ ಲಕ್ಷಾಂತರ ರೂ. ವಂಚನೆ ಮಾಡಿದ್ದಾಳೆ. ಶಿಕ್ಷಕಿಯಾಗಿದ್ದ ಕವಿತಾ ಕಾರಣಾಂತರಗಳಿಂದ ಶಿಕ್ಷಕ ವೃತ್ತಿಯನ್ನು ಕಳೆದುಕೊಂಡಿದ್ದಳು. ಬಳಿಕ ಅವಿವಾಹಿತರು ಮತ್ತು ವಿಚ್ಛೇದಿತರನ್ನು ಮ್ಯಾಟ್ರಿಮೊನಿ ಮೂಲಕ ಬಲೆಗೆ ಕೆಡವಿಕೊಂಡು ಅವರೊಂದಿಗೆ ಇರುವ ಖಾಸಗಿ ಕ್ಷಣದ ಫೋಟೋ ಹಾಗೂ ವಿಡಿಯೋ ಮೂಲಕ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಳು.
ಡಿಸೆಂಬರ್ 22ರಂದು ಯುವಕನೊಬ್ಬನ ವಿರುದ್ಧ ಕವಿತಾ ಅತ್ಯಾಚಾರದ ಆರೋಪ ಮಾಡಿದ್ದಳು. ಸಂತ್ರಸ್ತ ಯುವಕ ಅತ್ಯಾಚಾರವೆಸಗಿ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಳು. ಅಷ್ಟೇ ಅಲ್ಲದೆ ಪೊಲೀಸರನ್ನು ಕರೆಸಿ ಅವರ ಸಮ್ಮುಖದಲ್ಲೇ ಆ ಯುವಕನ ಜೊತೆಗಿನ ಖಾಸಗಿ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಳು. ಬಳಿಕ ಡಿ. 31ರಂದು ಮತ್ತೆ ಅದೇ ಯುವಕನ ವಿರುದ್ದ ಎರಡನೇ ಬಾರಿ ಕವಿತಾ ದೂರು ನೀಡಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದಾಗ ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಕವಿತಾಳನ್ನು ಇಂದಿರಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
PublicNext
04/01/2021 04:21 pm