ಲಖನೌ: ದೇಶದ ಒಳಗೆ ಮತ್ತು ಹೊರಗೆ ಎಷ್ಟೇ ಭದ್ರತೆ ವಹಿಸಿದ್ದರು ಕೂಡ ಕೆಲವು ಅಚಾತುರ್ಯಗಳು ಸಂಭವಿಸಿರುತ್ತವೆ.
ಅದೇ ಸಾಲಿನಲ್ಲಿ ಇದೀಗ ಉತ್ತರ ಪ್ರದೇಶದ ಗ್ರಾಮ ಪಂಚಾಯಿತಿಗೆ ಪಾಕಿಸ್ತಾನ ಮೂಲದ ಮಹಿಳೆ ಮುಖ್ಯಸ್ಥೆಯಾಗಿದ್ದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿ ಐದು ವರ್ಷಗಳ ನಂತರ ಆಕೆಯ ನಿಜ ಬಣ್ಣ ಬಯಲಾಗಿದೆ.
ಬಾನೋ ಬೇಗಂ ಹೆಸರಿನ ಮಹಿಳೆ 35 ವರ್ಷಗಳ ಹಿಂದೆ ಸಂಬಂಧಿಯೊಬ್ಬರ ಮದುವೆಗೆಂದು ಪಾಕಿಸ್ತಾನದಿಂದ ಉತ್ತರ ಪ್ರದೇಶದ ಇಟಾಕ್ಕೆ ಬಂದಿದ್ದರು.
ಇಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಆಕೆ ಇಲ್ಲಿನ ಅಖ್ತರ್ ಅಲಿ ಹೆಸರಿನ ವ್ಯಕ್ತಿಯನ್ನು ಮದುವೆಯಾಗಿದ್ದರು.
ಹಾಗಾಗಿ ವೀಸಾ ಅವಧಿಯನ್ನು ವಿಸ್ತರಿಸಲಾಗಿತ್ತು. ಅದನ್ನೇ ದುರುಪಯೋಗ ಪಡಿಸಿಕೊಂಡ ಮಹಿಳೆ ಇಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆಗೆ ನಿಂತು, ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈಕೆ 2015ರಲ್ಲಿಯೇ ಪಂಚಾಯಿತಿಗೆ ಆಯ್ಕೆಯಾಗಿದ್ದರು. ಆ ಪಂಚಾಯಿತಿಯ ಅಧ್ಯಕ್ಷೆ ಶಹನಾಜ್ ಬೇಗಂ ಇತ್ತೀಚೆಗೆ ಮೃತರಾಗಿದ್ದಾರೆ.
ಅದಾದ ನಂತರ ಬಾನೋ ಬೇಗಂನನ್ನು ಅಧ್ಯಕ್ಷರಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ.
ಇದಕ್ಕೆ ಒಪ್ಪದ ಕೆಲ ಸದಸ್ಯರ ತಕರಾರಿನಿಂದಾಗಿ ಆಕೆಯ ನಿಜ ಬಣ್ಣ ಬಯಲಾಗಿದೆ.
ಐದು ವರ್ಷಗಳ ಹಿಂದೆ ಚುನಾವಣೆಗಾಗಿ ಮಹಿಳೆ ಹಣ ಕೊಟ್ಟು ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿ ಮಾಡಿಸಿಕೊಂಡಿದ್ದಾರೆ.
ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮಹಿಳೆಯ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಆಕೆಗೆ ಸಹಾಯ ಮಾಡಿದವರ ಪತ್ತೆಗೆ ಮುಂದಾಗಿದ್ದಾರೆ.
PublicNext
31/12/2020 04:48 pm