ಮೈಸೂರು: ಪತಿಯ ಅನುಮಾನಕ್ಕೆ ಬೇಸತ್ತ ಗೃಹಿಣಿಯೊಬ್ಬರು ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೇತ್ರಾ (38) ಅನುಮಾನಾಸ್ಪದವಾಗಿ ಮೃತಪಟ್ಟ ಗೃಹಿಣಿ. ಮಗಳನ್ನು ಕೊಂದು ನೇತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪತಿ ಆರೋಪಿಸಿದ್ದಾರೆ. ಆದರೆ ನೇತ್ರಾ ಪೋಷಕರು ಪುತ್ರಿಯ ಪತಿ ಹರ್ಷ, ಮಾವ ಸುಂದರ ರಾಜು ಹಾಗೂ ಅತ್ತೆ ಸುಜಾತ ಸೇರಿದಂತೆ ನಾಲ್ವರ ವಿರುದ್ಧ ಆಲನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹರ್ಷನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನೇತ್ರಾ ಪೋಷಕರ ಆರೋಪದ ಪ್ರಕಾರ, ಪುತ್ರಿ ಹಾಗೂ ಹರ್ಷ ಮದುವೆ 13 ವರ್ಷಗಳ ಹಿಂದೆ ನೆರವೇರಿತ್ತು. ದಾಂಪತ್ಯ ವೈಮನಸ್ಯದಿಂದಾಗಿ ಇವರಿಬ್ಬರು ಕಳೆದ ಕೆಲವು ದಿನದಿಂದ ಬೇರೆ-ಬೇರೆಯಾಗಿದ್ದರು. ಜೀವನ ನಿರ್ವಹಣೆಗಾಗಿ ನೇತ್ರಾ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಹಣದ ವಿಚಾರದಲ್ಲಿ ಆಗಾಗ ಗಂಡ-ಹೆಂಡ್ತಿ ನಡುವೆ ಗಲಾಟೆ ಆಗುತ್ತಿತ್ತು.
ನೇತ್ರಾ ನಡತೆಯ ಬಗ್ಗೆ ಹರ್ಷ ಅನುಮಾನ ವ್ಯಕ್ತಪಡಿಸುತ್ತಿದ್ದ. ಈ ವಿಚಾರವಾಗಿ ದಂಪತಿ ಮಧ್ಯ ಆಗಾಗ ಗಲಾಟೆಯಾಗುತ್ತಿತ್ತು. 15 ದಿನಗಳ ಹಿಂದಷ್ಟೇ ದಂಪತಿಯನ್ನು ಒಂದು ಮಾಡಲಾಗಿತ್ತಾದರೂ ಜಗಳ ತಾರಕಕ್ಕೆ ಹೋದ ಪರಿಣಾಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ನೇತ್ರಾ ಪೋಷಕರು ಆರೋಪಿಸಿದ್ದಾರೆ.
PublicNext
30/12/2020 06:07 pm