ಬೆಂಗಳೂರು: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರ್ತಾರೆ. ಇಲ್ಲೊಬ್ಬ ಭೂಪ ಮದುವೆ ಆಗೋದಾಗಿ ನಂಬಿಸಿ ಮಹಿಳೆಯಿಂದ 70 ಲಕ್ಷ ಹಣ ಸ್ವೀಕರಿಸಿ ಮೋಸ ಮಾಡಿದ್ದಾನೆ
ಶಾದಿ ಡಾಟ್ ಕಾಂನಲ್ಲಿ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿರುವ ಈ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಚ್ಛೇದಿತ ಮಹಿಳೆ ಕಳೆದ ಎರಡು ವರ್ಷಗಳಿಂದ ಜೋಡಿಗಾಗಿ ಹುಡುಕುತ್ತಿದ್ದರು.
ಹೀಗಿರುವಾಗ ಶಾದಿ ಡಾಟ್ಕಾಂನಲ್ಲಿ ಕಾರ್ತಿಕ್ ಎಂಬಾತನ ಪರಿಚಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಮಹಿಳೆಗೆ ಆರೋಪಿ ಕಾರ್ತಿಕ್ ಹತ್ತಿರವಾಗಿದ್ದ. ಬಳಿಕ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ಅಪಾರ್ಟ್ಮೆಂಟ್ ಖರೀದಿಸೋಣ ಎಂದು 70 ಲಕ್ಷ ರೂಪಾಯಿ ಪಡೆದು ಅರೆಹಳ್ಳಿಯ ಬಳಿ ಪ್ಲ್ಯಾಟ್ ಖರೀದಿಸಿದ್ದ.
ಕೆಲ ದಿನಗಳ ಬಳಿಕ ನಿನ್ನ ನಡತೆ ಸರಿಯಿಲ್ಲ ಎಂದು ಕಾರ್ತಿಕ್ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಮದುವೆಯಾಗುವುದಿಲ್ಲ ಎಂದು ಹೇಳಿದ್ದನಂತೆ. ವಿಚ್ಛೇದಿತ ಮಹಿಳೆಯ 13 ವರ್ಷದ ಮಗಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದೇ ರೀತಿ ಹಲವು ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
PublicNext
28/12/2020 08:50 am