ಫಿರೋಜಾಬಾದ್: ಜನರಿಂದ ಹಣ ವಸೂಲಿಗೆ ಇಳಿದಿದ್ದ ನಕಲಿ ಇನ್ಸ್‌ಪೆಕ್ಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಇನ್ಸ್‌ಪೆಕ್ಟರ್ ಎಂದು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಈತನನ್ನು ಕಂಡ ಅಸಲಿ ಪೊಲೀಸ್ ಅಧಿಕಾರಿಗಳು ದಂಗಾಗಿದ್ದಾರೆ.
ದಢೂತಿ ದೇಹದ ಈತನ ಹೆಸರು ಮುಖೇಶ್ ಯಾದವ್. ವಯಸ್ಸು ಕೇವಲ 23! ಬರೋಬ್ಬರಿ 150 ಕೆ.ಜಿ ತೂಕ ಇದ್ದಾನಂತೆ. ಉತ್ತರ ಪ್ರದೇಶದ ಘಾಜಿಯಾಬಾದ್ ನಿವಾಸಿಯಾದ ಈತ ಫಿರೋಜಾಬಾದ್‌ನ ಹಲವೆಡೆ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಈತನ ಉಪಟಳಕ್ಕೆ ಬೇಸತ್ತ ಸಾರ್ವಜನಿಕರು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನಂತರ ಈತನನ್ನು ಹಿಡಿದು ಠಾಣೆಗೆ ಕರೆದೊಯ್ದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದ ಪೊಲೀಸರಿಗೆ ಈತ ನಕಲಿ ಪೊಲೀಸ್ ಎಂಬುದು ಗೊತ್ತಾಗಿದೆ. ಸಾಲದ್ದಕ್ಕೆ ಈತ ತನ್ನ ಬಳಿ ನಕಲಿ ಆಧಾರ್ ಕಾರ್ಡ್, ನಕಲಿ ಮತದಾರರ ಚೀಟಿ, ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ನಕಲಿ ಐಡೆಂಟಿಟಿ ಕಾರ್ಡ್ ಹೊಂದಿದ್ದ. ಅದೆಲ್ಲವನ್ನೂ ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
PublicNext
03/10/2022 01:50 pm