ದಾವಣಗೆರೆ: ಮದುವೆಯಾದ ಮಹಿಳೆ ಜೊತೆ ಆಕೆಯ ಪ್ರಿಯಕರನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದಲ್ಲಿ ನಡೆದಿದೆ.
ಬೆಂಗಳೂರಿನ ನಾಗರತ್ನ, ಚರಣ್ ಎಂಬುವವರು ಸಾವಿಗೆ ಶರಣಾದ ಜೋಡಿ. ನಾಗರತ್ನಳಿಗೆ ಈಗಾಗಲೇ ಮದುವೆಯಾಗಿತ್ತು. ಆದರೂ ಚರಣ್ ಮೇಲೆ ಆಕೆಗೆ ಪ್ರೇಮಾಂಕುರವಾಗಿತ್ತು. 21 ವರ್ಷದ ನಾಗರತ್ನ ಎಂಬಾಕೆಯು ಆಧಾರ್ ಕಾರ್ಡ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಏಳು ತಿಂಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಲು ಬಂದ ಚರಣ್ ಗೆ ಆಕೆಯ ಪರಿಚಯವಾಗಿದೆ. ಆ ಬಳಿಕ ಇಬ್ಬರು ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದಾರೆ.
ಟಿವಿಎಸ್ ಕಂಪೆನಿಯಲ್ಲಿ ಸೂಪರ್ ವೈಸರ್ ಆಗಿದ್ದ ಚರಣ್ ಮತ್ತು ನಾಗರತ್ನ ಒಬ್ಬರನ್ನೊಬ್ಬರು ಬಿಟ್ಟಿರಲು ಆಗದಷ್ಟರ ಮಟ್ಟಿಗೆ ಪ್ರೀತಿ ಮಾಡುತ್ತಿದ್ದರು. ಆದ್ರೆ, ನಿನ್ನೆ ಬೆಂಗಳೂರಿನಿಂದ ಚನ್ನಗಿರಿ ತಾಲೂಕಿನ ಬೆಂಕಿಕೆರೆಯವರೆಗೆ ಬೈಕ್ ನಲ್ಲಿ ಬಂದಿದ್ದಾರೆ. ಕೆರೆಯ ನೀರಿನಲ್ಲಿ ಆಟವಾಡಿದ್ದಾರೆ, ಮೋಜು ಮಸ್ತಿಯನ್ನು ಮಾಡಿದ್ದಾರೆ. ಇವರಿಬ್ಬರು ಕೆರೆಯ ದಂಡೆ ಮೇಲೆ ಕುಳಿತು ನೀರಿನಲ್ಲಿ ಆಟ ಆಡುತ್ತಿದ್ದದ್ದನ್ನು ಶಿವಣ್ಣ ಎಂಬುವವರು ನೋಡಿದ್ದಾರೆ.
ಕೆರೆಯ ದಂಡೆ ಮೇಲೆ ಸುಮಾರು ಹೊತ್ತು ಕಳೆದ ಬಳಿಕ ಇಬ್ಬರೂ ಕೈಗೆ ವೇಲ್ ಅನ್ನು ಬಿಗಿದುಕೊಂಡು ನೀರಿಗೆ ಜಿಗಿದು ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಪೀಣ್ಯದ ಕಾರ್ಖಾನೆಯೊಂದರಲ್ಲಿ ನಾಗರತ್ನಳ ಪತಿ ಕೆಲಸ ಮಾಡುತ್ತಿದ್ದರು. ನಾಗರತ್ನ ಹಾಗೂ ಚರಣ್ ಕಾಣೆಯಾದ ಬಗ್ಗೆ ಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರದ್ದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬುದು ಕಂಡು ಬಂದಿದೆ. ಚನ್ನಗಿರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
PublicNext
18/08/2022 06:26 pm