ತಿರುವನಂತಪುರಂ: ಮಹಿಳಾ ಪೊಲೀಸ್ ಅಧಿಕಾರಿಯಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಂದೆಗೆ ಹೈಕೋರ್ಟ್ ಆದೇಶದ ಅನ್ವಯ 1.75 ಲಕ್ಷ ರೂಪಾಯಿ ಪರಿಹಾರ ನೀಡಲು ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಆ ಹಣವನ್ನು ಪೊಲೀಸ್ ಅಧಿಕಾರಿ ರೆಜಿತಾರಿಂದ ಸಂಗ್ರಹಿಸಲು ಗೃಹ ಸಚಿವಾಲಯ ಮುಂದಾಗಿದೆ. ಈ ಮೂಲಕ ಸುಮಾರು 6 ತಿಂಗಳಿಗೂ ಹೆಚ್ಚು ಕಾಲದ ಬಾಲಕಿಯ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
ಏನಿದು ಘಟನೆ ಗೊತ್ತಾ?:
ಆಗಸ್ಟ್ 27ರಂದು ಜಯಚಂದ್ರನ್ ತನ್ನ ಮಗಳೊಂದಿಗೆ ಇಸ್ರೋ ಘಟಕಕ್ಕೆ ಉಪಕರಣಗಳನ್ನು ಸಾಗಿಸುವ ಬೃಹತ್ ಟ್ರೈಲರ್ ಚಲನೆಯನ್ನು ವೀಕ್ಷಿಸಲು ಇಲ್ಲಿನ ಅಟ್ಟಿಂಗಲ್ ಬಳಿಯ ಹೊರವಲಯದಲ್ಲಿರುವ ಮುಖ್ಯ ರಸ್ತೆಗೆ ಹೋಗಿದ್ದರು. ಈ ವೇಳೆ ಕೇರಳ ಪೊಲೀಸ್ ಇಲಾಖೆಯ ಪಿಂಕ್ ಪೊಲೀಸ್ ಘಟಕದ ಅಧಿಕಾರಿ ರೆಜಿತಾ ಅವರ ಮೊಬೈಲ್ ಕಳೆದುಹೋಗಿತ್ತು. ಮೊಬೈಲ್‌ಅನ್ನು ಜಯಚಂದ್ರನ್ ಕದ್ದಿದ್ದಾರೆ ಎಂದು ಭಾವಿಸಿದ ರೆಜಿತಾ ಸಾರ್ವಜನಿಕರ ಎದುರಲ್ಲೇ ಬಾಲಕಿ ಮತ್ತು ಆಕೆಯ ತಂದೆಗೆ ಕೆಟ್ಟ ಪದಗಳಿಂದ ಅವಮಾನಿಸಿದ್ದರು. ಈ ವೇಳೆ ನೂರಾರು ಜನರು ಸೇರಿದರು. ಇದಾದ ಬಳಿಕ ರೆಜಿತಾ ಅವರ ಮೊಬೈಲ್ ಪೊಲೀಸ್ ವಾಹನದಲ್ಲೇ ಪತ್ತೆಯಾಯಿತು. ಇದಿಷ್ಟು ಘಟನೆಯನ್ನು ದಾರಿಹೋಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ವಿಡಿಯೋ ವೈರಲ್ ಸಹ ಆಗಿತ್ತು.
ಮಹಿಳಾ ಪೊಲೀಸ್ ಅಧಿಕಾರಿ ರೆಜಿತಾ ವಿರುದ್ಧ ಕಾನೂನು ಹೋರಾಟ ನಡೆಸಿದ ಬಾಲಕಿ ಹಾಗೂ ಆಕೆಯ ತಂದೆ ಜಯಚಂದ್ರನ್ ಗೆಲುವು ಸಾಧಿಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳಾ ಅಧಿಕಾರಿಯನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು ಹಾಗೂ 1.75 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ನೀಡಿತ್ತು.
PublicNext
14/07/2022 10:42 pm