ಚಿತ್ರದುರ್ಗ : ರಕ್ಷಣೆ ಇಲ್ಲದ ಅಮೃತ್ ಮಹಲ್ ಕವಲ್ ನಿಂದ ಅಕ್ರಮವಾಗಿ ಕಲ್ಲು,ಮಣ್ಣು ಗಾಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪವೊಂದು ಕಡೂರು ಗ್ರಾಮದಲ್ಲಿ ಕೇಳಿ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರೂ ವ್ಯಾಪ್ತಿಯ ಕಡೂರು ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು, ಮಣ್ಣು ಗಾಣಿಗಾರಿಕೆ ಮಾಡಿ ಬೇರೆಡೆಗೆ ಸಾಗಿಸುತ್ತಿದ್ದಾರೆ ಎನ್ನಲಾಗಿದೆ.
ಸುಮಾರು ವರ್ಷಗಳಿಂದ ಅಮೃತ್ ಮಹಲ್ ಕವಲ್ ನಿಂದ ಅಕ್ರಮವಾಗಿ ಗಾಣಿಕಾರಿಕೆ ನಡೆಯುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎನ್ನಲಾಗಿದೆ. ಪ್ರಭಾವಿಗಳ ಕೈವಾಡದಿಂದ ಅಮೃತ್ ಮಹಲ್ ಕವಲ್ ಮಣ್ಣನ್ನು ಖಾಸಗಿ ಕಟ್ಟಡಗಳಿಗೆ ಹಾಗೂ ಮನೆಯ ತಳಪಾಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಹೊಳಲ್ಕೆರೆ ತಹಶೀಲ್ದಾರ್ ಅವರು ದಾವಣಗೆರೆಯಲ್ಲಿ ಮನೆ ಕಟ್ಟಿಸುತ್ತಿದ್ದು, ಅವರ ಮನೆಗೆ ರಾತ್ರಿ 8 ಲೋಡ್ ಟಿಪ್ಪರ್ ಮೂಲಕ ಮಣ್ಣು ಸಾಗಿಸಿದ್ದಾರೆ ಎಂದು ಗ್ರಾಮದಲ್ಲಿ ಇತ್ತೀಚಿನ ಆರೋಪ ಕೇಳಿ ಬಂದಿದೆ. ಇದಲ್ಲದೆ ಬೇರೆ ಬೇರೆ ಕಡೆಗೆ ಕಲ್ಲು, ಮಣ್ಣು ಸಾಗಿಸುತ್ತಿದ್ದಾರೆ ಎನ್ನಲಾಗಿದೆ. ಎರಡು ಜೆಸಿಬಿ, ಮೂರು ಟಿಪ್ಪರ್ ಲಾರಿಗಳನ್ನು ಗ್ರಾಮಸ್ಥರು ತಡೆದು ನಿಲ್ಲಿಸಿದ್ದಾರೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಾವು ಜೆಸಿಬಿ, ಟಿಪ್ಪರ್ ಗಳನ್ನು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
PublicNext
13/09/2021 03:53 pm