ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಆಗಸ್ಟ್ 17 ರ ರಾತ್ರಿ ನಡೆದ ಬಟ್ಟೆ ಅಂಗಡಿ ಮಾಲೀಕನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ಮೂಲ್ ಸಿಂಗ್ (34) ಹತ್ಯೆ ಮಾಡಲಾಗಿತ್ತು. ಹೊಳಲ್ಕೆರೆ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ ಪೋಲಿಸರು ಹತ್ಯೆಯ ಆರೋಪಿಗಳನ್ನು ಬಂಧಿಸಿದ್ದಾರೆ.
ಆಗಸ್ಟ್ 17 ರಂದು ಬೆಳಿಗ್ಗೆ ಮೂಲ್‍ಸಿಂಗ್ ಮತ್ತು ಅವರ ಅಂಗಡಿಯಲ್ಲಿ ಕೆಲಸ ಮಾಡುವ ಉಮೇದ್ ಸಿಂಗ್ ಇಬ್ಬರೂ ವ್ಯಾಪಾರ ಮುಗಿಸಿ ರಾತ್ರಿ 08.50 ಗಂಟೆಯಲ್ಲಿ ಪೂಜೆ ಮಾಡುತ್ತಿರುವಾಗ ಹಿಂದಿನಿಂದ ಬಂದ ಯಾರೋ ಇಬ್ಬರು ದುಷ್ಕರ್ಮಿಗಳು ಮೂಲ್‍ಸಿಂಗ್‍ನ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಜಿಲ್ಲಾ ವರಿಷ್ಠಾಧಿಕಾರಿ ರಾಧಿಕಾ. ಇವರ ನಿರ್ದೇಶನದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ.ಮಹಾನಿಂಗ ಬಿ ನಂದಗಾಂವಿ ಹಾಗೂ ಚಿತ್ರದುರ್ಗ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ.ಎಸ್.ಪಾಂಡುರಂಗರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. ಸದರಿ ಪ್ರಕರಣದ ಆರೋಪಿತರನ್ನು ಪತ್ತೆಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ ಇವರು ಅಭಿನಂದಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.
PublicNext
31/08/2021 08:04 pm