ದಾವಣಗೆರೆ: "ಪಂಚಾಯ್ತಿ ಮಾಡೋದು, ಜನರಿಗೆ ಹೆದರಿಸೋದು, ಹಫ್ತಾ ವಸೂಲಿ ಮಾಡಲು ಮುಂದಾದರೆ ಯಾವುದೇ ಕಾರಣಕ್ಕೂ ಸಹಿಸಲ್ಲ. ಜನರಿಗೆ ತೊಂದರೆ ಕೊಟ್ಟ ಬಗ್ಗೆ ದೂರು ಬಂದರೆ ಸುಮ್ಮನಿರೋಲ್ಲ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ನಗರದ ಹೈಸ್ಕೂಲ್ ಕ್ರೀಡಾಂಗಣದಲ್ಲಿ ರೌಡಿ ಪರೇಡ್ ವೇಳೆ ಈ ಎಚ್ಚರಿಕೆ ನೀಡಿರುವ ಅವರು, ಜನರನ್ನು ಹೆದರಿಸಿ ಕೆಲವರು ಪುಂಡಾಟಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ರೌಡಿಶೀಟರ್ ಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ನಗರದ ವಿವಿಧ ಬಡಾವಣೆಯ ಸುಮಾರು 80ಕ್ಕೂ ಹೆಚ್ಚು ರೌಡಿಶೀಟರ್ ಗಳು ಬಂದಿದ್ದರು. ಇನ್ನು ಕೆಲವರಿಗೆ ವಯಸ್ಸಾಗಿರುವ ವಿಚಾರವೂ ಗಮನಕ್ಕೆ ಬಂದಿದೆ. ಅವರ ಸನ್ನಡತೆ ಆಧಾರವಾಗಿಟ್ಟುಕೊಂಡು ಅವರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆಯುವ ಕುರಿತಂತೆ ಪರಾಮರ್ಶೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದರು.
ರೌಡಿಗಳು ಎಂದಾಕ್ಷಣ ಎಲ್ಲವೂ ನಿಮ್ಮ ಕೈಯಲ್ಲಿಲ್ಲ. ಪೊಲೀಸ್ ಇಲಾಖೆಯು ರೌಡಿಗಳ ಚಲನವಲನದ ಮೇಲೆ ನಿಗಾ ಇಡುವಂತೆ ಆಯಾ ಪೊಲೀಸ್ ಠಾಣೆಗಳ ಇನ್ ಸ್ಪೆಕ್ಟರ್ ಅವರಿಗೆ ಸೂಚನೆ ನೀಡಿದ ರಿಷ್ಯಂತ್ ಅವರು, ಸಾರ್ವಜನಿಕರಿಂದ ದೂರು ಬಂದರೆ ಮುಲಾಜಿಲ್ಲದೇ ಕಾನೂನು ರೀತಿಯಲ್ಲಿ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
PublicNext
26/08/2021 01:43 pm