ಬೆಂಗಳೂರು: ರಾಷ್ಟ್ರ ರೈತನಾಯಕ ರಾಜೇಶ್ ಟಿಕಾಯತ್‌ಗೆ ಮಸಿ ಬಳಿದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಮೂವರು ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಾದ ಭರತ್ ಶೆಟ್ಟಿ, ಪ್ರದೀಪ್ ಮತ್ತು ಶಿವಕುಮಾರ್ ಎಂಬುವರನ್ನು ವಿಚಾರಣೆಗೆ ಒಳಪಡಿಸಿದ್ದು ಆರೋಪಿಗಳು ಯಾರ ಕುಮ್ಮಕ್ಕಿನಿಂದ ಈ ಕೃತ್ಯವೆಸಗಿದ್ರು? ಯಾವ ಉದ್ದೇಶಕ್ಕೆ ಮಸಿ ಬಳಿದು ಹಲ್ಲೆ ಮಾಡಿದ್ರು? ಎಂಬ ಬಗ್ಗೆ ವಿಚಾರಣೆ ನಡೆಸ್ತಿದ್ದಾರೆ. ವಿಚಾರಣೆ ವೇಳೆ ಕನ್ನಡ ಮಾತನಾಡಿಲ್ಲ ಎಂಬ ಕಾರಣಕ್ಕೆ ಕೃತ್ಯ ಮಾಡಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ. ಆದ್ರೆ ಟಿಕಾಯತ್ ಉತ್ತರ ಪ್ರದೇಶದವರಾದ್ದರಿಂದ ಆರೋಪಿಗಳ ಹೇಳಿಕೆಯನ್ನ ಪೊಲೀಸರು ಒಪ್ಪುತ್ತಿಲ್ಲ.
ಆರೋಪಿಗಳ ಹೇಳಿಕೆ ಮೇಲೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಕೃತ್ಯದ ಹಿಂದೆ ಕಾಣದ ಕೈಗಳು ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಭರತ್ ಶೆಟ್ಟಿ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಶಿವಕುಮಾರ್ ಕೂಡ ಕೆಲ ಕೇಸ್‌ನಲ್ಲಿ ಜೈಲು ಸೇರಿದ್ದಾಗಿ ಮಾಹಿತಿ ಇದೆ. ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ವಿಚಾರಣೆ ಮಾಡಿರುವ ಪೊಲೀಸರು ಇಂದು ಮೂವರು ಆರೋಪಿಗಳನ್ನ ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹೈಗ್ರೌಂಡ್ಸ್ ಠಾಣಾ ಇನ್ಸ್ಪೆಕ್ಟರ್ ಶಿವಸ್ವಾಮಿಯಿಂದ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಮೂವರು ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಘಟನೆಗೂ ಮುನ್ನ ಯಾರ ಜೊತೆ ಸಂಪರ್ಕ ಮಾಡಿದ್ದರು ಎಂದು ಪರಿಶೀಲನೆ ನಡೆಸ್ತಿದ್ದಾರೆ. ಜೊತೆಗೆ ಇದೊಂದು ಪೂರ್ವ ನಿಯೋಜಿತ ಎಂಬುದು ತನಿಖೆ ವೇಳೆ ಬಯಲಾಗಿದೆ.
PublicNext
31/05/2022 01:22 pm