ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಗೂಢ ಯೋಗಿಯ ಸಂಪರ್ಕದಿಂದ ವಿವಾದ; ಷೇರುಪೇಟೆ ಮಾಜಿ ಸಾಮ್ರಾಜ್ಞಿಗೆ ಸಿಗಲಿಲ್ಲ ಬೇಲ್

ಮುಂಬೈ: ಹಣದ ಅಕ್ರಮ ವರ್ಗಾವಣೆಯಲ್ಲಿ ಸಿಲುಕಿರುವ ಷೇರುಪೇಟೆಯ ಸಾಮ್ರಾಜ್ಞಿಯಾಗಿ ಮೆರೆದಿದ್ದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್‌ನ (ಎನ್​ಎಸ್​ಇ) ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿದ್ದ ಚಿತ್ರಾ ರಾಮಕೃಷ್ಣ ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್​ ನಿರಾಕರಿಸಿದೆ. ಕಳೆದ ಮಾರ್ಚ್​ 6ರಂದು ಬಂಧನವಾಗಿದ್ದ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ.

ಲೆಕ್ಕಪರಿಶೋಧಕಿ ಚಿತ್ರಾ, ಹಗರಣ..? 2013ರಿಂದ ಈ ಹುದ್ದೆಯನ್ನು ಅಲಂಕರಿಸಿದ್ದ ಚಿತ್ರಾ ವೃತ್ತಿಯಲ್ಲಿ ಲೆಕ್ಕಪರಿಶೋಧಕಿ ಆಗಿದ್ದ ಅವರು, ಎನ್​ಎಸ್​ಇ ಗಣಕೀಕರಣ ಮತ್ತು ಸರ್ಕಾರ ಇಪಿಎಫ್​ಒದ ಫಂಡ್ ಅನ್ನು ಷೇರುಗಳಲ್ಲಿ ಹೂಡಿಕೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, 2016ರಲ್ಲಿ ವೈಯಕ್ತಿಕ ಕಾರಣ ಕೊಟ್ಟು ದಿಢೀರಾಗಿ ಎನ್​ಎಸ್​ಇ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2014 -2016 ರ ಅವಧಿಯಲ್ಲಿ ಇಮೇಲ್ ಐಡಿ ಮೂಲಕ ನಡೆಸಿದ ವ್ಯವಹಾರದಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಎನ್‌ಎಸ್‌ಇಯ ಆಂತರಿಕ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಭಾರಿ ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಆಡಳಿತದಲ್ಲಿ ಲೋಪ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಅದರ ಚೌಕಟ್ಟಿನಲ್ಲಿ ಚಿತ್ರಾ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಚಿತ್ರಾ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಈ ಮೊದಲು ಕೋರ್ಟ್​ ತಿರಸ್ಕರಿಸಿತ್ತು. ಈ ಹಿನ್ನೆಲೆ ಮಾರ್ಚ್‌ 6ರಂದು ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು.

ಘಟನೆ..? ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್‌ನ ಸರ್ವರ್ ವ್ಯವಸ್ಥೆಯನ್ನು ಖಾಸಗಿ ಕಂಪನಿ ದೆಹಲಿ ಮೂಲದ ಒಪಿಜಿ ಸೆಕ್ಯುರೀಟಿಸ್ ಪ್ರೈವೇಟ್ ಲಿಮಿಟೆಡ್​ನ ಮಾಲೀಕ ಸಂಜಯ್ ಗುಪ್ತಾ ಮತ್ತು ಪ್ರಮೋಟರ್​ಗಳು ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳ ಜತೆಗೂಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅದೇ ರೀತಿ, ಮುಂಬೈನ ಎನ್​ಎಸ್​ಇನ ಅನಾಮಧೇಯ ಅಧಿಕಾರಿಗಳು 2010-12ರ ಅವಧಿಯಲ್ಲಿ ಸ್ಟಾಕ್ ಎಕ್ಸ್​ಚೇಂಜ್​ನ ಸರ್ವರ್​ಗೆ ಲಾಗಿನ್ ಆಗುವುದಕ್ಕೆ ಹೊರಗಿನ ಕಂಪೆನಿಗೆ ಅನುಕೂಲ ಮಾಡಿಕೊಟ್ಟಿದ್ದರು. ಎನ್​ಎಸ್​ಇನ ಟ್ರೇಡಿಂಗ್ ದತ್ತಾಂಶಗಳ ಪ್ರಕಾರ, ಮೊದಲು ಲಾಗಿನ್ ಆಗಿರುವ ಪ್ರಕರಣಗಳಲ್ಲಿ ಶೇಕಡ 90 ಲಾಗಿನ್ ಸಂಜಯ್ ಗುಪ್ತಾ ಹೆಸರಲ್ಲಿರುವುದಾಗಿ ಆರೋಪಿಸಲಾಗಿದೆ.

ಸೆಬಿ ಆಂತರಿಕ ತನಿಖೆ: ಎನ್​ಎಸ್​ಇ 2017ರಲ್ಲಿ ಐಪಿಒ ಬಿಡುಗಡೆ ಮಾಡಿ ಮಾರುಕಟ್ಟೆ ಪ್ರವೇಶಿಸಬೇಕಾಗಿತ್ತು. ಆದರೆ, ಸರ್ವರ್ ಅನ್ನು ಕೋ-ಲೊಕೇಶನ್ ಮೂಲಕ ಶೇರ್ ಮಾಡಿಕೊಂಡಿದ್ದ ಕಾರಣ ಎನ್​ಎಸ್​ಇ ಪ್ರಯತ್ನಕ್ಕೆ ಸೆಬಿ ತಡೆ ನೀಡಿತ್ತು. ಮೂರು ವರ್ಷಗಳ ತನಿಖೆ ಬಳಿಕ ಎನ್​ಎಸ್​ಇಗೆ 90 ದಶಲಕ್ಷ ಡಾಲರ್​ಗೂ ಅಧಿಕ ದಂಡ ವಿಧಿಸಿತು. ಅಲ್ಲದೆ ಆರು ತಿಂಗಳ ಅವಧಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಹಣ ಸಂಗ್ರಹಿಸದಂತೆ ನಿಷೇಧ ಹೇರಿತ್ತು. ಇದನ್ನು ಎನ್​ಎಸ್​ಇ ಕೋರ್ಟ್​ನಲ್ಲಿ ಪ್ರಶ್ನಿಸಿತ್ತು. ಬಳಿಕ ಐಪಿಒ ಬಿಡುಗಡೆಗೆ ಸೆಬಿಯಿಂದ ಅನುಮತಿ ಪಡೆದಿತ್ತು. ಇದಕ್ಕಾಗಿ ಸಲ್ಲಿಸಿದ ದಾಖಲೆಗಳು ಈಗ ಸೆಬಿಯ ಪರಿಶೀಲನೆಯಲ್ಲಿವೆ.

ಕುತೂಹಲದ ಏನೆಂದರೆ, ಹಿಮಾಲಯದಲ್ಲಿ ವಾಸಿಸುವ ಯೋಗಿ ಎಂದು ಹೇಳಲಾಗುವ ವ್ಯಕ್ತಿಯೊಂದಿಗೆ ಇಮೇಲ್ ಮೂಲಕ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ನ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನುವ ಆರೋಪವಿದೆ. ಈ ತಿಂಗಳ ಆರಂಭ ಪ್ರಕರಣಕ್ಕೆ ಸಂಬಂಧ ಬಂಧನಕ್ಕೊಳಗಾಗಿದ್ದ ಆನಂದ್ ಸುಬ್ರಮಣ್ಯಂ ಅವರೇ ಈ ಯೋಗಿ ಎಂಬ ಶಂಕೆ ವ್ಯಕ್ತವಾಗಿದೆ.

2013ರ ಏಪ್ರಿಲ್‌ನಲ್ಲಿ ಮುಖ್ಯ ಕಾರ್ಯತಂತ್ರದ ಸಲಹೆಗಾರರಾಗಿ ಸೇರಿದ ಆನಂದ್ ಸುಬ್ರಮಣ್ಯಂ ಅವರು, 2015-16ರಲ್ಲಿ ಎನ್‌ಎಸ್‌ಇಯ ಗ್ರೂಪ್ ಆಪರೇಟಿಂಗ್ ಆಫೀಸರ್ ಮತ್ತು ಚಿತ್ರಾ ರಾಮಕೃಷ್ಣ ಅವರ ಸಲಹೆಗಾರರಾಗಿದ್ದರು. ಅವರನ್ನು ಸಲಹೆಗಾರರಾಗಿ ನೇಮಿಸಲು ಚಿತ್ರಾ ಅವರು ನಿಗೂಢ ಯೋಗಿಯಿಂದ ಮಾರ್ಗದರ್ಶನ ಪಡೆದರು ಎಂದು (ಸೆಬಿ) ಹೇಳಿದ ನಂತರ ಚಿತ್ರಾ ರಾಮಕೃಷ್ಣ ರಾಷ್ಟ್ರದ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿದ್ದರು.

Edited By : Abhishek Kamoji
PublicNext

PublicNext

29/08/2022 04:12 pm

Cinque Terre

37.11 K

Cinque Terre

1