ನೈಜೀರಿಯಾ : ಇದ್ದಕ್ಕಿದ್ದ ಹಾಗೆ ಇಲ್ಲಿಯ ವಸತಿ ಶಾಲೆಯೊಂದಕ್ಕೆ ನುಗ್ಗಿದ ಬಂದೂಕುಧಾರಿಗಳು 317 ವಿದ್ಯಾರ್ಥಿನಿಯರನ್ನು ಅಪಹರಿಸಿಕೊಂಡು ಹೋಗಿರುವ ಘಟನೆ ಉತ್ತರ ನೈಜೀರಿಯಾದ ಜಂಗೆಬ್ಬೆ ನಗರದಲ್ಲಿನ ಬಾಲಕಿಯರ ಸರ್ಕಾರಿ ಕಿರಿಯ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ.
ಏಕಾಏಕಿ ಶಾಲೆಗೆ ಬಂದೂಕು ಜತೆ ನುಗ್ಗಿದ ಉಗ್ರರು ಈ ಕೃತ್ಯ ಎಸಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಮತ್ತು ಮಿಲಿಟರಿ ಜಂಟಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿನಿಯರನ್ನು ರಕ್ಷಿಸಲು ಯತ್ನಿಸಿದರು ಸಾಧ್ಯವಾಗಲಿಲ್ಲ. ಬಂದೂಕುಧಾರಿ ಉಗ್ರರು ಶಾಲೆಯಲ್ಲಿ ಹಲವಾರು ಗಂಟೆ ಇದ್ದರು. ಅವರ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳಿದ್ದ ಕಾರಣ ಸೇನಾ ಪಡೆಯಿದ್ದರೂ, ಬಾಲಕಿಯರನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ, 10 ರಿಂದ 13 ವರ್ಷದ ಮಕ್ಕಳು ಓದುತ್ತಿದ್ದರು. ಎಲ್ಲಾ ಮಕ್ಕಳನ್ನು ಸುರಕ್ಷಿತವಾಗಿ ಅವರ ಪೋಷಕರ ಬಳಿ ತಲುಪಿಸುವುದೇ ನಮ್ಮ ಮೂಲ ಉದ್ದೇಶ ಎಂದು ತಿಳಿಸಿದ್ದಾರೆ. ಹಣಕ್ಕಾಗಿ ಇಲ್ಲವೇ ಜೈಲಿನಲ್ಲಿರುವ ತಮ್ಮ ಗುಂಪಿನ ಸದಸ್ಯರನ್ನು ಬಿಡುಗಡೆ ಮಾಡಲು ಈ ರೀತಿ ಮಾಡಿರುವ ಸಾಧ್ಯತೆಗಳು ಇವೆ. ಆದರೆ ಇದಕ್ಕೆಲ್ಲಾ ನಾವು ಜಗ್ಗುವುದಿಲ್ಲ. ಮಕ್ಕಳನ್ನು ಸುರಕ್ಷಿತವಾಗಿ ಪಾಲಕರ ಬಳಿ ಬಿಡಲಾಗುವುದು ಎಂದ್ದಾರೆ.
ಈ ಘಟನೆಗೆ ವಿಶ್ವಸಂಸ್ಥೆ ಖಂಡನೆ ವ್ಯಕ್ತಪಡಿಸಿದೆ. ಶಾಲೆಗಳ ಮೇಲಿನ ದಾಳಿಯು ಮಾನವ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ವಿಶ್ವ ಸಂಸ್ಥೆ ವಕ್ತಾರ ಸ್ಟಿಫನ್ ದುಜಾರ್ರಿಕ್ ಹೇಳಿದ್ದಾರೆ.
PublicNext
28/02/2021 08:13 am