ನ್ಯೂಯಾರ್ಕ್: ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯರ ಮೇಲೆ ಜನಾಂಗೀಯ ನಿಂದನೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಟೆಕ್ಸಾಸ್ ನಗರದಲ್ಲಿ ನಾಲ್ವರು ಭಾರತೀಯ ಮೂಲದ ಮಹಿಳೆಯರ ಮೇಲೆ ದ್ವೇಷದ ಮಾತು, ಜನಾಂಗೀಯ ನಿಂದನೆ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಮತ್ತೊಂದು ಇಂಥದ್ದೇ ಪ್ರಕರಣ ಕ್ಯಾಲಿಫೋರ್ನಿಯಾದಿಂದ ವರದಿಯಾಗಿದೆ. ರೆಸ್ಟೊರೆಂಟ್ ಒಂದರಲ್ಲಿ ಭಾರತೀಯ ಮೂಲಕ ಅಮೆರಿಕನ್ ಸಿಖ್ಖ್ ಒಬ್ಬ ‘ಕೊಳಕು ಹಿಂದೂ’, ‘ಅಸಹ್ಯ ಹುಟ್ಟಿಸುವ ನಾಯಿ’ (“dirty Hindu” and a “disgusting dog”) ಎಂದು ಭಾರತೀಯನನ್ನು ನಿಂದಿಸಿದ್ದಾನೆ.
ಈತನಿಂದ ನಿಂದನೆಗೆ ಒಳಗಾದವರ ಹೆಸರು ಕೃಷ್ಣನ್ ಜಯರಾಮನ್. ಹೀಗೆ ಅವಮಾನಕಾರಿಯಾಗಿ ನಿಂದಿಸಿದವನನ್ನು ತೇಜಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಕ್ಯಾಲಿಫೋರ್ನಿಯಾದ ಟಾಕೊ ಬೆಲ್ ಎಂಬಲ್ಲಿ ಆಗಸ್ಟ್ 21ರಂದು ಘಟನೆ ನಡೆದಿದೆ ಎಂದು ಎನ್ಬಿಸಿ ನ್ಯೂಸ್ ಜಾಲತಾಣ ವರದಿ ಮಾಡಿದೆ. ಆರೋಪಿ ತೇಜಿಂದರ್ ಸಿಂಗ್ ವಿರುದ್ಧ ದ್ವೇಷದ ಅಪರಾಧ, ನಾಗರಿಕ ಹಕ್ಕುಗಳ ಉಲ್ಲಂಘನೆ, ಸಾರ್ವಜನಿಕ ಶಾಂತಿಗೆ ಭಂಗ, ದಾಳಿ, ನಿಂದನಾತ್ಮಕ ಭಾಷೆ ಬಳಸುವುದು ಸೇರಿದಂತೆ ಹಲವು ಕಲಂಗಳ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೃಷ್ಣನ್ ಜಯರಾಮನ್ ಅವರು ದನದ ಮಾಂಸ ತಿನ್ನುವುದಿಲ್ಲ ಎಂದ ಬಳಿಕ ಸಿಟ್ಟಿಗೆದ್ದ ತೇಜಿಂದರ್ ಸಿಂಗ್, ‘ನೀನೊಬ್ಬ ಅಸಹ್ಯ ಹುಟ್ಟಿಸುವ ನಾಯಿ. ನಿನ್ನನ್ನು ನೋಡಲು ಇಷ್ಟವಾಗುವುದಿಲ್ಲ. ಸಾರ್ವಜನಿಕವಾಗಿ ಹೀಗೆ ಹೊರಗೆ ಬರಬೇಡ. ಕೊಳಕು ಹಿಂದೂ’ ಎಂದು ಎರಡು ಬಾರಿ ಉಗಿದಿದ್ದಾನೆ. ಬಳಿಕ ಮಾಂಸ ತಿನ್ನು ಎಂದು ಕಿರುಚಿದ್ದಾನೆ.
ಸುಮಾರು 5 ನಿಮಿಷ ತೇಜಿಂದರ್ ಸಿಂಗ್ ಒಂದೇ ಸಮ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾನೆ. ‘ಇದು ಭಾರತವಲ್ಲ, ಅಮೆರಿಕ ಗೊತ್ತಾಯ್ತಾ’ ಎಂದು ಹೇಳಿರುವುದು ಸಹ ವಿಡಿಯೊದಲ್ಲಿ ದಾಖಲಾಗಿದೆ. ಘಟನೆಯಿಂದ ಆಘಾತವಾಯಿತು ಎಂದು ಕೃಷ್ಣನ್ ಜಯರಾಮನ್ ಹೇಳಿದ್ದಾರೆ. ನನ್ನನ್ನು ನಿಂದಿಸಿದ ವ್ಯಕ್ತಿಯೂ ಭಾರತೀಯ ಎಂದು ತಿಳಿದ ಬಳಿಕೆ ಬೇಸರ ಮತ್ತಷ್ಟು ಹೆಚ್ಚಾಯಿತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
‘ಅವನಿಗೆ ನನ್ನನ್ನು ನೋಡಿದ ತಕ್ಷಣ ಏಕೆ ಅಷ್ಟು ಸಿಟ್ಟು ಬಂತೋ ಗೊತ್ತಾಗಲಿಲ್ಲ. ‘ನಿನ್ನೊಂದಿಗೆ ಜಳವಾಡೋಕೆ ನಾನು ಬಂದಿಲ್ಲ. ಏಕೆ ಹೀಗೆ ಮಾಡ್ತಿದ್ದೀ’ ಎಂದು ಕೇಳಿದೆ. ನಿಜಕ್ಕೂ ಅವನ ವರ್ತನೆಯಿಂದ ನಾನು ಭಯಗೊಂಡಿದ್ದೆ. ಒಂದು ವೇಳೆ ಅವನು ನನಗೆ ಹೊಡೆಯಲು ಶುರು ಮಾಡಿದರೆ ಏನು ಮಾಡಬೇಕು ಎಂಬುದು ನನ್ನ ಆತಂಕವಾಗಿತ್ತು’ ಎಂದು ಕೃಷ್ಣನ್ ಜಯರಾಮನ್ ಹೇಳಿದರು.
‘ಅವನಿಗೆ ನಾನು ಹಿಂದೂ ಎನ್ನುವ ಒಂದೇ ವಿಷಯ ಸಮಸ್ಯೆಯಾಗಿತ್ತು. ನೀವು ಹಿಂದುಗಳು ಅವಮಾನ, ಅಸಹ್ಯ ಎಂದೆಲ್ಲಾ ನಿಂದಿಸಿ ನನ್ನ ಮೇಲೆ ಉಗಿದ. ನಂತರ ರೆಸ್ಟೊರೆಂಟ್ ನೌಕರರ ನೆರವಿನಿಂದ ನಾನು ಪೊಲೀಸರಿಗೆ ವಿಷಯ ತಿಳಿಸಿದೆ. ಪೊಲೀಸರು ತಕ್ಷಣ ಬಂದು ನನಗೆ ಸಹಾಯ ಮಾಡಿದರು’ ಎಂದು ಕೃಷ್ಣನ್ ತಿಳಿಸಿದ್ದಾರೆ. ‘ಅಮೆರಿಕದಲ್ಲಿ ವಾಸಿಸುವ ಎಲ್ಲ ಸಮುದಾಯಗಳೂ ಪರಸ್ಪರ ಗೌರವ ತೋರಬೇಕು. ಜನಾಂಗೀಯ ನಿಂದನೆಯಂಥ ಘಟನೆಗಳು ನಡೆದಾಗ ನಮ್ಮ ಗಮನಕ್ಕೆ ತನ್ನಿ. ನಾವು ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ
PublicNext
01/09/2022 01:50 pm