ಜಿ ಮಹಂತೇಶ್
ಬೆಂಗಳೂರು; ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಸಹಾಯಕ ಅಭಿಯಂತರರು, ಎಫ್‌ಡಿಎ, ಎಸ್‌ಡಿಎ ಪರೀಕ್ಷೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ದೈಹಿಕ ಶಿಕ್ಷಕರ ಹುದ್ದೆಗಳ ಪರೀಕ್ಷೆಯಲ್ಲಿಯೂ ಬ್ಲೂಟೂತ್ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಹಲವು ಅಭ್ಯರ್ಥಿಗಳು ಅಕ್ರಮ ನಡೆಸಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವು 2017ರ ಮೇ ಮತ್ತು ಜೂನ್ ತಿಂಗಳಲ್ಲಿ ನಡೆಸಿದ್ದ ಎಸ್‌ಡಿಎ, ಎಫ್‌ಡಿಎ ಹಾಗೂ 2017ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಡೆಸಿದ್ದ ಸಹಾಯಕ ಅಭಿಯಂತರರ ಪರೀಕ್ಷೆಗಳಲ್ಲಿಯೂ ಬೇರೆ ವ್ಯಕ್ತಿಗಳ ಸಹಾಯದಿಂದ ಎಲೆಕ್ಟ್ರಾನಿಕ್ ಡಿವೈಸ್ ಬಳಸಲಾಗಿತ್ತು ಎಂದು ವಿಚಾರಣೆಯಲ್ಲಿ ಕೆಲ ಅಭ್ಯರ್ಥಿಗಳು ಸ್ವ ಇಚ್ಛಾ ಹೇಳಿಕೆಯನ್ನೂ ನೀಡಿದ್ದಾರೆ. ಎಲೆಕ್ಟ್ರಾನಿಕ್ ಡಿವೈಸ್ ಬಳಸಿದ್ದನ್ನು ಅಭ್ಯರ್ಥಿಗಳು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದರೂ ಇದುವರೆಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ತನಿಖಾ ವರದಿ ಸಲ್ಲಿಕೆಯಾಗಿಲ್ಲ.
ಪಿಎಸ್‌ಐ ನೇಮಕಾತಿಯಲ್ಲಿಯೂ ಬ್ಲೂಟೂತ್ ಬಳಸಿದ್ದನ್ನು ಪತ್ತೆ ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದರ ಬೆನ್ನಲ್ಲೇ 2017ರಲ್ಲಿಯೂ ಬ್ಲೂಟೂತ್ ಬಳಕೆಯಾಗಿತ್ತು ಎಂದು ಆರೋಪಿಗಳು ನೀಡಿರುವ ಸ್ವ ಇಚ್ಛಾ ಹೇಳಿಕೆಯು ನೇಮಕಾತಿಯಲ್ಲಿನ ಅಕ್ರಮಗಳನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ದೈಹಿಕ ಶಿಕ್ಷಕರ ಹುದ್ದೆಗಳಿಗೆ 2017ರ ಅಕ್ಟೋಬರ್ 16ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷಾ ಸಮಯದಲ್ಲಿ ಹೈಟೆಕ್ ತಂತ್ರಜ್ಞಾನ ಬಳಸಿ ನಕಲು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಮೂವರು ಅಭ್ಯರ್ಥಿಗಳನ್ನು ಕರ್ನಾಟಕ ಲೋಕಸೇವಾ ಆಯೋಗವು ಶಾಶ್ವತ ಡಿಬಾರ್ ಮಾಡಿ ಹೊರಡಿಸಿರುವ ಆದೇಶದಲ್ಲಿ ಸಹಾಯಕ ಅಭಿಯಂತರ, ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗಳ ಅಕ್ರಮಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ಸಂಬಂಧ 2022ರ ಜುಲೈ 29ರಂದು ಆಯೋಗವು ಹೊರಡಿಸಿರುವ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೆಪಿಎಸ್‌ಸಿ ಹೊರಡಿಸಿರುವ ಆದೇಶ ಆಯೋಗವು 2017ರ ಮೇ-ಜೂನ್ ತಿಂಗಳಲ್ಲಿ ನಡೆಸಿದ್ದ ಎಸ್‌ಡಿಎ ಮತ್ತು ಎಫ್‌ಡಿಎ ಹಾಗೂ ಜುಲೈ ಆಗಸ್ಟ್ ತಿಂಗಳಲ್ಲಿ ನಡೆಸಿದ್ದ ಸಹಾಯಕ ಅಭಿಯಂತರರ ಪರೀಕ್ಷೆಗಳಲ್ಲಿಯೂ ಬೇರೆ ವ್ಯಕ್ತಿಗಳ ಸಹಾಯದಿಂದ ಎಲೆಕ್ಟ್ರಾನಿಕ್ ಡಿವೈಸ್ ಬಳಸಿರುವ ಬಗ್ಗೆ ತಿಪ್ಪೇಶ್ ನಾಯ್ಕ (ನೋಂದಣಿ ಸಂಖ್ಯೆ 12722102) ಎಂಬ ಅಭ್ಯರ್ಥಿಯು ಹಾಗೂ ಸ್ವ ಇಚ್ಛಾ ಹೇಳಿಕೆ ನೀಡಿದ್ದು ಈ ಸಂಬಂಧ ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಗುನ್ನೆ ನಂ 140/2017) ದಾಖಲಾಗಿತ್ತು ಎಂಬ ಸಂಗತಿಯು ಆದೇಶದಿಂದ ತಿಳಿದು ಬಂದಿದೆ.
‘ಈ ಅಭ್ಯರ್ಥಿಗಳು ಪರೀಕ್ಷಾ ಸಮಯದಲ್ಲಿ ಅಕ್ರಮ ಎಸಗಿದ್ದಾರೆಂದು ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣೆ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಈ ಸಂಬಂಧ ಇದುವರೆಗು ತನಿಖಾ ವರದಿ ಸ್ವೀಕೃತವಾಗಿಲ್ಲ,’ ಎಂದು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ದೈಹಿಕ ಶಿಕ್ಷಕರ ಹುದ್ದೆಗಳಿಗೆ ಸಂಬಂಧಿಸಿದಂತೆ 2017ರ ಅಕ್ಟೋಬರ್ 16ರಂದು ದಾವಣಗೆರೆಯ ನೂತನ ಪದವಿಪೂರ್ವ ವಿಜ್ಞಾನ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಈ ವೇಳೆ ಸುಭಾಷ್ (ನೋಂದಣಿ ಸಂಖ್ಯೆ 1269419) ಶ್ರೀನಿವಾಸ (ನೋಂದಣಿ ಸಂಖ್ಯೆ 1265670) ಇಬ್ಬರು ಅಭ್ಯರ್ಥಿಗಳು ಪರೀಕ್ಷಾ ಸಮಯದಲ್ಲಿ ಮೈಕ್ರೋಫೋನ್ ಹಾಗೂ ಬ್ಲೂಟೂತ್ ಸಹಾಯದೊಂದಿಗೆ ನಕಲು ಮಾಡುತ್ತಿದ್ದನ್ನು ಕೇಂದ್ರದ ಪ್ರಾಂಶುಪಾಲರು ಪತ್ತೆ ಹಚ್ಚಿದ್ದರು. ಅವರ ಹತ್ತಿರ ಇದ್ದ ಉಪಕರಣ ಮತ್ತು ಅಭ್ಯರ್ಥಿಗಳಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ವಶಪಡಿಸಿಕೊಂಡು ಅವುಗಳನ್ನು ಪೊಲೀಸರ ವಶಕ್ಕೆ ನೀಡಲಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಪೊಲೀಸ್ ನಿರೀಕ್ಷಕರು ತಿಪ್ಪೇಶ್ ನಾಯ್ಕ (ನೋಂದಣಿ ಸಂಖ್ಯೆ 12722102) ಎಂಬ ಮತ್ತೊಬ್ಬ ಅಭ್ಯರ್ಥಿಯನ್ನು ವಿಚಾರಣೆ ನಡೆಸಿದ್ದರು. ಆಯೋಗದಿಂದ 2017ರ ಮೇ-ಜೂನ್ ತಿಂಗಳಲ್ಲಿ ನಡೆಸಲಾಗಿದ್ದ ಎಸ್‌ಡಿಎ ಮತ್ತು ಎಫ್‌ಡಿಎ ಹಾಗೂ ಜುಲೈ ಆಗಸ್ಟ್ ತಿಂಗಳಲ್ಲಿ ನಡೆಸಿದ್ದ ಸಹಾಯಕ ಅಭಿಯಂತರರ ಪರೀಕ್ಷೆಗಳಲ್ಲಿಯೂ ಬೇರೆ ವ್ಯಕ್ತಿಗಳ ಸಹಾಯದಿಂದ ಎಲೆಕ್ಟ್ರಾನಿಕ್ ಡಿವೈಸ್ ಬಳಸಿರುವ ಬಗ್ಗೆ ಸ್ವ ಇಚ್ಛಾ ಹೇಳಿಕೆ ನೀಡಿದ್ದ. ಈ ಸಂಬಂಧ ದಾವಣಗೆರೆಯ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಗುನ್ನೆ ನಂ 140/2017) ದಾಖಲಾಗಿತ್ತು.
2022ರ ಜೂನ್ 3ರಂದು ನಡೆಸಿದ ಅಂತಿಮ ವಿಚಾರಣೆಯಲ್ಲಿ ಸುಭಾಷ್, ತಿಪ್ಪೇಶ್‌ನಾಯ್ಕ, ಶ್ರೀನಿವಾಸ ಡಿ ಈ ಮೂವರು ಅಭ್ಯರ್ಥಿಗಳು 2017ರ ಅಕ್ಟೊಬರ್ 15 ಮತ್ತು 16ರಂದು ನಡೆದ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ದೈಹಿಕ ಶಿಕ್ಷಕರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆಯನ್ನು ನಕಲು ಮಾಡಿರುವುದಾಗಿ ಒಪ್ಪಿಕೊಂಡು ಲಿಖಿತ ಹೇಳಿಕೆ ನೀಡಿದ್ದಾರೆ ಎಂದು ವಿಚಾರಣೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂವರು ಅಭ್ಯರ್ಥಿಗಳ ಲಿಖಿತ ಹೇಳಿಕೆಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ವಿಚಾರಣಾಧಿಕಾರಿಗಳು ಆಪಾದಿತ ಸುಭಾಷ್, ಶ್ರೀನಿವಾಸ್, ತಿಪ್ಪೇಶ್‌ನಾಯ್ಕ ಅವರು ನೀಡಿದ್ದ ಹೇಳಿಕೆಗಳನ್ವಯ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿ ಪರೀಕ್ಷಾ ಸಮಯದಲ್ಲಿ ದುರಾಚಾರ ಎಸಗಿರುವುದು ಸಾಬೀತಾಗಿದೆ ಎಂಬ ನಿರ್ಣಯಕ್ಕೆ ಬರಲಾಗಿದೆ ಎಂದು 2022ರ ಜೂನ್ 18ರಂದು ಅಭಿಪ್ರಾಯ ನೀಡಿರುವುದು ಆದೇಶದಿಂದ ಗೊತ್ತಾಗಿದೆ.
ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977ರ ನಿಯಮ 20ರ ಅಡಿ ಮತ್ತು ಆಯೋಗದ ಅಧಿಕೃತ ಜ್ಞಾಪನ ಪತ್ರದಂತೆ 2017ರ ಜೂನ್ 23ರಂದು ಅಧಿಸೂಚಿಸಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ ದೈಹಿಕ ಶಿಕ್ಷಕರುಗಳ ಹುದ್ದೆಗಳಿಗೆ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದುರಾಚಾರ ಎಸಗಿರುವ ತಿಪ್ಪೇಶ್‌ನಾಯ್ಕ, ಸುಭಾಷ್, ಶ್ರೀನಿವಾಸ ಡಿ ಅವುರಗಳನ್ನು ಆಯೋಗವು ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಶಾಶ್ವತವಾಗಿ ಡಿಬಾರ್ ಮಾಡಿ ದಂಡನೆಯನ್ನು 2022ರ ಜುಲೈ 29ರಂದು ಕರ್ನಾಟಕ ಲೋಕಸೇವಾ ಆಯೋಗವು ಆದೇಶ ಹೊರಡಿಸಿದೆ.
ಕೃಪೆ : 'ದಿ ಫೈಲ್'
PublicNext
09/08/2022 03:44 pm