ತಿರುವನಂತಪುರ: ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ಮತ್ತು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ನಡುವೆ ಮಂಗಳವಾರ ರಾತ್ರಿ ಮಾರಾಮಾರಿ ನಡೆದಿದೆ. ಈ ಗಲಾಟೆಯಲ್ಲಿ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ. ಎರಡು ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಜಗಳ ಉಂಟಾಗಿದೆ.
ಕೆಎಸ್‌ಯು ನಾಯಕಿ ಸಫ್ನಾ ಯಾಕೂಬ್ ಅವರನ್ನು ಎಸ್‌ಎಫ್‌ಐ ಸದಸ್ಯರು ಥಳಿಸಿದ್ದಾರೆ ಎಂದು ಹೇಳಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಧಾನ ಕಾರ್ಯದರ್ಶಿ ಆಶಿಕ್ ಅಶ್ರಫ್, ನಿತಿನ್ ಥಂಪಿ ಮತ್ತು ಎಸ್‌ಎಫ್‌ಐ ಸಮಿತಿ ಸದಸ್ಯ ಆನಂದು ಅವರನ್ನು ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಸಂಬಂಧ ವಿಡಿಯೋ ಟ್ವೀಟ್ ಮಾಡಿರುವ ಕೇರಳ ಕಾಂಗ್ರೆಸ್, 'ತಿರುವನಂತಪುರಂ ಕಾನೂನು ಕಾಲೇಜಿನಲ್ಲಿ ಮಹಿಳೆಯರ ಮೇಲೆ ಸಿಪಿಐಎಂ ಕ್ರೂರ ದೌರ್ಜನ್ಯ ಎಸಗಿದೆ. ಕೇರಳ ವಿದ್ಯಾರ್ಥಿ ಸಂಘದ ಮಹಿಳಾ ನಾಯಕಿ ಸಫ್ನಾ ಅವರನ್ನು ಎಸ್‌ಎಫ್‌ಐ ಗೂಂಡಾಗಳು ಸುತ್ತುವರಿದು ಹಲ್ಲೆ ನಡೆಸಿದ್ದಾರೆ. ಮುಖ್ಯಮಂತ್ರಿ ವಿಜಯನ್ ಪಿಣರಾಯಿ ಅವರೇ ನೀವು ಜಗತ್ತಿಗೆ ತೋರಿಸಲು ಬಯಸುವ ಮಹಿಳಾ ಸುರಕ್ಷತೆ ಮತ್ತು ಕೇರಳ ಮಾಡೆಲ್ ಇದೇನಾ? ನಮಗೆ ಅನುಮಾನ ಮೂಡಿದೆ' ಎಂದು ಬರೆದುಕೊಂಡಿದೆ.
PublicNext
16/03/2022 07:12 pm