ಮುಂಬೈ: ನೀಲಿಚಿತ್ರ ತಯಾರಿ ಪ್ರಕರಣದಲ್ಲಿ ಬಂಧನಕ್ಕೊಳಗಾದ 2 ತಿಂಗಳ ಬಳಿಕ ಉದ್ಯಮಿ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾಗೆ ಜಾಮೀನು ನೀಡಿ ಮುಂಬೈ ಕೋರ್ಟ್ ಆದೇಶ ನೀಡಿದೆ. 50,000 ರೂ. ಶ್ಯೂರಿಟಿ ಮೇಲೆ ಮುಂಬೈ ನ್ಯಾಯಾಲಯ ಇಂದು ಜಾಮೀನು ನೀಡಿದೆ.
ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಕೆಲವು ಅಪ್ಲಿಕೇಶನ್‌ಗಳ ಮೂಲಕ ಅವುಗಳನ್ನು ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾರನ್ನು ಜುಲೈನಲ್ಲಿ ಬಂಧಿಸಲಾಗಿತ್ತು. ಸಿಂಗಪುರದ ನಿವಾಸಿಯಾದ ಯಶ್ ಠಾಕೂರ್ ಮತ್ತು ಲಂಡನ್ ಮೂಲದ ಪ್ರದೀಪ್ ಬಕ್ಷಿ ಅವರನ್ನು ಇನ್ನಿಬ್ಬರು ಆರೋಪಿಗಳೆಂದು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ರಾಜ್ ಕುಂದ್ರಾ ವಿರುದ್ಧ ಕಳೆದ ಗುರುವಾರ ಮುಂಬೈ ಪೊಲೀಸರು 1,400 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಜಾಮೀನು ಕೋರಿ ಶನಿವಾರ ಅರ್ಜಿ ಸಲ್ಲಿಸಿದ್ದ ರಾಜ್ ಕುಂದ್ರಾ ತನ್ನನ್ನು 'ಬಲಿಪಶು' ಮಾಡಲಾಗುತ್ತಿದೆ ಹಾಗೂ 'ಚಾರ್ಜ್ ಶೀಟ್‌ನಲ್ಲಿ ತಾನು ಅಶ್ಲೀಲ ಚಿತ್ರವನ್ನು ರಚಿಸುವಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಾದಿಸಿದ್ದರು.
PublicNext
20/09/2021 06:28 pm