ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿ ಮತ್ತೊಂದು ಬಲಿ ಪಡೆದುಕೊಂಡಿದೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೃದ್ಧನೋರ್ವ ರಸ್ತೆ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ನೆಲಕ್ಕುರುಳಿ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಮೈಕೋ ಲೇಔಟ್‌ನ ಬಿಸ್ಮಿಲ್ಲಾ ನಗರ ನಿವಾಸಿ ಖುರ್ಷಿದ್ ಅಹಮ್ಮದ್ (75) ಮೃತ ದುರ್ದೈವಿ. ಖುರ್ಷಿದ್ ಅಹಮ್ಮದ್ ಅವರು ಸೋಮವಾರ ರಾತ್ರಿ 9:30ರ ಸುಮಾರಿನಲ್ಲಿ ವಿಶ್ವೇಶ್ವರಯ್ಯ ಲೇಔಟ್, 3ನೇ ಬ್ಲಾಕ್‌ನ ಮಂಗಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಮಳೆ ಬರುತ್ತಿತ್ತು. ಈ ಮಾರ್ಗದಲ್ಲಿ ಒಳಚರಂಡಿ ಸ್ವಚ್ಛಗೊಳಿಸುವ ಸಲುವಾಗಿ ಮಣ್ಣನ್ನು ತೆಗೆದು ರಸ್ತೆ ಮೇಲೆ ಹಾಕಲಾಗಿತ್ತು. ಹೀಗಾಗಿ ರಸ್ತೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ಮುಂದಾಗುತ್ತಿದ್ದಂತೆ ಖುರ್ಷಿದ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ.
ಗಂಭೀರ ಗಾಯಗೊಂಡ ಖುರ್ಷಿದ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
PublicNext
08/09/2021 08:55 am