ಲಕ್ನೋ: ಹತ್ರಾಸ್ ಗ್ಯಾಂಗ್ ರೇಪ್ ಕಿಚ್ಚು ಹೊತ್ತಿ ಉರಿಯುತ್ತಿರುವಾಗಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದೆ.
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 13 ವರ್ಷದ ಬಾಲಕಿಯ ಮೇಲೆ ಮೂವರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಹಾಗೂ ಆರೋಪಿಗಳು ದಾದ್ರಿ ಪ್ರದೇಶದ ನೆರೆಹೊರೆಯವರಾಗಿದ್ದು, ಒಬ್ಬರಿಗೊಬ್ಬರು ಪರಿಚಿತರು. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಗೌತಮ್ ಬುದ್ಧ ನಗರ ಉಪ ಪೊಲೀಸ್ ಆಯುಕ್ತ ವೃಂದಾ ಶುಕ್ಲಾ ಮಾಹಿತಿ ನೀಡಿದ್ದಾರೆ.
ನೆರೆಹೊರೆಯಲ್ಲಿ ವಾಸಿಸುವ ಮೂವರು ಆರೋಪಿಗಳು 12 ವರ್ಷದ ಬಾಲಕನ ಸಹಾಯದಿಂದ ಮಗಳನ್ನು ತಮ್ಮ ಮನೆ ಕರೆಸಿಕೊಂಡಿದ್ದರು. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆಯ ಬಳಿಕ ಮಗಳು ನನ್ನ ಬಳಿ ಹೇಳಿಕೊಂಡಿದ್ದಾಳೆ ಎಂದು ಸಂತ್ರಸ್ತೆಯ ತಾಯಿ ದೂರಿದ್ದಾರೆ.
ಸದ್ಯ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
PublicNext
09/10/2020 10:53 am