ಮುಂಬೈ: ತಮ್ಮ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಲು ನಟಿ ಕಂಗನಾ ರನೌತ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಗೀತ ರಚನೆಕಾರ, ಲೇಖಕ ಜಾವೇದ್ ಅಖ್ತರ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಟಿ ಕಂಗನಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. " ನಟಿ ಕಂಗನಾ ಟಿವಿ ಸಂದರ್ಶನಗಳಲ್ಲಿ ನನ್ನ ವಿರುದ್ಧ ಮಾನಹಾನಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಪುರಾವೆ ಇಲ್ಲದೇ ಹೇಳಿಕೆ ನೀಡಿ ತಮ್ಮ ಹೆಸರನ್ನು ತಳಕು ಹಾಕಿದ್ದಾರೆ" ಎಂದು ಅಖ್ತರ್ ಆರೋಪಿಸಿದ್ದರು.
ಈ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ ಆರಂಭಿಸಿದ ಸಂಪೂರ್ಣ ವಿಚಾರಣೆಯನ್ನು ರದ್ದುಗೊಳಿಸುವಂತೆ ಕಂಗನಾ ಬಾಂಬೆ ಹೈಕೋರ್ಟ್‌ಗೆ ಸರ್ಜಿ ಸಲ್ಲಿಸಿದ್ದರು. 'ಅಖ್ತರ್ ದೂರಿನ ಅನ್ವಯ ಪೊಲೀಸರು ನಡೆಸಿರುವ ತನಿಖೆ ಏಕಪಕ್ಷೀಯವಾಗಿದೆ. ನನ್ನ ಕಕ್ಷಿದಾರರ ವಿಚಾರಣೆಯನ್ನೇ ನಡೆಸಿಲ್ಲ' ಎಂದು ಕಂಗನಾ ಪರ ವಕೀಲರಾದ ಸಿದ್ದಿಕಿ ಈ ಹಿಂದೆ ಹೈಕೋರ್ಟ್‌ಗೆ ತಿಳಿಸಿದ್ದರು ಹಾಗೂ ಮೊಕದ್ದಮೆ ರದ್ದುಪಡಿಸಲು ಮನವಿ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ.ರೇವತಿ ಮೊಹಿತೆ ಡೇರೆ ನೇತೃತ್ವದ ಏಕಸದಸ್ಯ ನ್ಯಾಯಪೀಠವು ಆದೇಶ ಕಾಯ್ದಿರಿಸಿತ್ತು. ಇಂದು ಕಂಗನಾ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ನಟಿ ಕಂಗನಾಗೆ ಮುಖಭಂಗವಾಗಿದೆ.
PublicNext
09/09/2021 12:31 pm