ಚಿಕ್ಕಬಳ್ಳಾಪುರ: ರಾಶಿ ರಾಶಿಯಾಗಿ ಸತ್ತು ಬಿದ್ದು ಗಬ್ಬು ನಾರುತ್ತಿರುವ ಮೀನುಗಳು, ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಸ್ಥಳೀಯರು, ರೋಗಗ್ರಸ್ತ ಮೀನುಗಳನ್ನು ಹಿಡಿಯಲು ಮುಗಿಬಿದ್ದಿರುವ ಜನರು. ಈ ದೃಶ್ಯವೆಲ್ಲ ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಅತಿದೊಡ್ಡ ಕಂದವಾರ ಕೆರೆಯಲ್ಲಿ ಕಂಡುಬಂತು.
ಹೆಚ್ ಎನ್ ವ್ಯಾಲಿ ಮತ್ತು ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕೆರೆ ತುಂಬಿ ಹರಿಯುತ್ತಿದೆ. ಎರಡು- ಮೂರು ಬಾರಿ ಕೋಡಿ ಹೋಗಿದ್ದು, ಕೋಡಿ ಹೋದ ಕೆರೆ ನೀರಿನಲ್ಲಿ ಮೀನುಗಳು ಕೊಚ್ಚಿ ಬಂದಿದೆ. ಅದ್ಯಾಕೋ ಏನೋ ಕೆರೆ ನಾಲೆಯಲ್ಲಿ ರಾಶಿ ರಾಶಿ ಮೀನುಗಳ ಮಾರಣಹೋಮ ನಡೆದು ಹೋಗಿದೆ. ಮೀನುಗಳೆಲ್ಲ ಕೊಳೆತು ಗಬ್ಬು ನಾರುತ್ತಿದ್ದು, ಈ ದುರ್ವಾಸನೆಗೆ ನಗರದ ಶಿಕ್ಷಕರ ಕಾಲೋನಿ, ಭಾರತಿನಗರದ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.
ಇನ್ನೂ ನಗರಸಭೆ ಅಧಿಕಾರಿಗಳಾಗಲೀ, ಮೀನುಗಾರಿಕೆ ಇಲಾಖೆಯವರೇ ಆಗಲಿ ಅತ್ತ ಮುಖ ಮಾಡಿಲ್ಲ. ಇದರಿಂದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ ಯಶಸ್ವಿನಿ ಮಾತನಾಡಿ, ನಾಲೆಯಲ್ಲಿ ನೀರು ಕಡಿಮೆ ಆದ ಕಾರಣ ಆಮ್ಲಜನಕ ಕೊರತೆಯಿಂದ ಮೀನುಗಳು ಉಸಿರುಗಟ್ಟಿ ಸತ್ತಿವೆ. ಮೀನು ಹಿಡಿದು ಬೇರೆಡೆ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಲಾಗುವುದು. ಜೊತೆಗೆ ಸತ್ತಿರುವ ಮೀನುಗಳ ರಾಶಿಯನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದರು.
PublicNext
06/10/2022 07:12 pm