ಮೊನ್ನೆ ಗತಿಸಿದ ರಾಕೇಶ ಝುಂಜುನ್ವಾಲಾ ಎಂಬ ಶೇರು ಮಾರುಕಟ್ಟೆ ದಿಗ್ಗಜನ ಕುರಿತ ಶ್ರದ್ಧಾಂಜಲಿ ಬರಹಗಳಲ್ಲಿ ಅವರು ಗಳಿಸಿದ ಆಸ್ತಿ, ಯಾವೆಲ್ಲ ಷೇರುಗಳು ಅಥವಾ ಹೂಡಿಕೆಗಳು ಅವರ ಕೈಹಿಡಿದವು ಎಂಬುದರ ವಿವರ ಹೊತ್ತಂಥ ಹಲವನ್ನು ನೀವು ಅದಾಗಲೇ ಸಾಕೆನಿಸುವಷ್ಟು ಓದಿರುತ್ತೀರಿ.
ಈ ಲೇಖನ ಅಂಥ ಯಾವ ಅಂಕಿಅಂಶಗಳನ್ನೂ ಮತ್ತೆ ಉಲ್ಲೇಖಿಸುತ್ತ ನಿಮ್ಮ ಸಮಯ ಹಾಳುಮಾಡುವುದಿಲ್ಲ. ಬದಲಿಗೆ, ಇಷ್ಟೆಲ್ಲ ಶ್ರೀಮಂತ ಎನಿಸಿಕೊಂಡ ರಾಕೇಶ್ ಝುಂಜುನ್ವಾಲಾ ಅವರದ್ದು ಸಂಪತ್ತಿನ ಕುರಿತಂತೆ ಯಾವ ದೃಷ್ಟಿಕೋನವಿತ್ತು ಅಂತ ನೋಡಬೇಕಲ್ಲವೇ? ರಾಕೇಶ್ ಝುಂಜುನ್ವಾಲಾ ಪ್ರಕಾರ ಹಣದ ಅರ್ಥವೇನು? ಮಹಾ ಸಿರಿವಂತನಾಗಿ ಬದುಕಿದ ಈ ಮನುಷ್ಯ ಬಿಟ್ಟುಹೋದ ಸಂಪತ್ತೆಷ್ಟು ಎಂಬುದಕ್ಕಿಂತ ಬಿಟ್ಟು ಹೋದ ಬದುಕಿನ ಫಿಲಾಸಫಿ ಏನು? ಯಾಕಂದ್ರೆ, ಅವರು ಬಿಟ್ಟುಹೋದ ಸಂಪತ್ತು ಅದೆಷ್ಟೇ ಅಗಾಧವಾಗಿದ್ದರೂ ಅವರ ಕುಟುಂಬವರ್ಗಕ್ಕೆ ಸೇರುವಂಥದ್ದು. ಆದರೆ ಅದ್ಯಾರೇ ಆಗಲಿ ಬಿಟ್ಟುಹೋಗುವ ಜೀವನತತ್ತ್ವ ಕೇವಲ ಕುಟುಂಬಕ್ಕಲ್ಲ, ಸಮಾಜದ ಉಪಯೋಗಕ್ಕೆ. ಈ ಹಿನ್ನೆಲೆಯಲ್ಲಿ, ರಾಕೇಶ್ ಝುಂಜುನ್ವಾಲಾ ಜೀವನದ ಫಿಲಾಸಫಿ, ಹಣಕ್ಕೆ ಆ ಮನುಷ್ಯ ಕೊಡುತ್ತಿದ್ದ ಬೆಲೆ ಇವೆಲ್ಲ ಹಲವು ಸಂದರ್ಶನಗಳಲ್ಲಿ ಜಾಹೀರಾಗಿವೆಯಾದರೂ, 2012ರಲ್ಲಿ ಮುಂಬೈನ ಅಮೆರಿಕ ಕಾನ್ಸುಲೇಟ್ ನಲ್ಲಿ ಅವರು ಮಾಡಿದ ಉಪನ್ಯಾಸ ಅದರ ಒಟ್ಟು ಸಾರವನ್ನು ಹಿಡಿದಿಟ್ಟಿದೆ. ರೀಡಿಫ್ ಪ್ರಕಟಿಸಿರುವ ಆ ಉಪನ್ಯಾಸದ ಸಾರಸಂಗ್ರಹ ರೂಪವನ್ನು ಈ ಕೆಳಗೆ ಓದಿಕೊಳ್ಳಬಹುದಾಗಿದೆ. ರಾಕೇಶ್ ಝುಂಜುನ್ವಾಲಾ ಅವರ ಮಾತಿನಲ್ಲಿ…
—
ನಿಮ್ಮ ಬಳಿ ಹಣವಿದ್ದರೆ ನೀವು ಮಾಡಬಹುದಾದ ಕೋಟಿ ಸಂಗತಿಗಳಿವೆ. ಆದರೆ ಹಣದೊಂದಿಗೆ ನೀವು ಮಾಡಲಾರದ ಸಂಗತಿ ಎಂದರೆ ಸತ್ತಾಗ ಅದನ್ನೂ ತೆಗೆದುಕೊಂಡುಹೋಗುವುದಕ್ಕೆ ಆಗುವುದಿಲ್ಲ. ಇಷ್ಟೆಲ್ಲ ಹಣ ಗಳಿಸಿದ ನಂತರ ನನಗೆ ಅರಿವಾಗಿರುವ ಒಂದು ಸಂಗತಿ ಎಂದರೆ ಹಣ ಎನ್ನುವುದು ಒಂದು ಸಾಧನವೇ ಹೊರತು ಅದೇ ಅಂತಿಮ ಗಮ್ಯವಾಗಲಾರದು ಅನ್ನೋದು. ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. 50ರ ಪ್ರಾಯದಲ್ಲಿರುವಾಗ ದಿನಕ್ಕೆ 25 ಸಿಗರೇಟು ಸೇದಿ, ಆರು ಪೆಗ್ ವಿಸ್ಕಿ ಕುಡಿದು, ಹಂದಿಯಂತೆ ತಿಂದುಕೊಂಡಿರುವ ನನಗೆ ಆಯಸ್ಸು ತುಂಬ ಕಡಿಮೆಯದ್ದಾಗಿದೆ. ದೇವರು ನನಗೆ ಸಂಪತ್ತು, ಯಶಸ್ಸು, ಒಳ್ಳೆಯ ಹೆಂಡತಿ, ಒಳ್ಳೆಯ ಸ್ನೇಹಿತರನ್ನು ಕೊಟ್ಟಿದ್ದಾನೆ. ಆದರೆ ಆರೋಗ್ಯವಿಲ್ಲ. ಆತ ಆರೋಗ್ಯದ ವಿಷಯದಲ್ಲಿ ನನ್ನನ್ನು ಹರಸಲೆಂದು ಬಯಸುತ್ತೇನೆ.
—
ಇವತ್ತಿಗಿಂತ ಇನ್ನೂ ಹತ್ತುಪಟ್ಟು ಸಂಪತ್ತು ಗಳಿಸಿದ ಕ್ಷಣದಲ್ಲಿ ನಾನು ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತೇನೆಯೇ? ಖಂಡಿತ ಇಲ್ಲ. ನೋಡಿ, ನೀವು ಹೆಣ್ಣಿನ ಹುಚ್ಚಿಗೆ ಬಿದ್ದರೆ ಒಲಿಸಿಕೊಂಡವರಿಗಿಂತ ಇನ್ನೂ ಯಾರನ್ನು ಆಕರ್ಷಿಸಬೇಕೋ ಅದರಲ್ಲೇ ಮಜ ಹೆಚ್ಚಿರುತ್ತದೆ. ಹಣ ಕೂಡ ಹಾಗೆಯೇ. ನಿಮ್ಮಲ್ಲಿ ಬಂದು ಜಮೆಯಾಗಿರುವ ಹಣಕ್ಕಿಂತ ಇನ್ನೂ ದುಡಿಯಬೇಕಿರುವ ಪ್ರಕ್ರಿಯೆಯೇ ಹೆಚ್ಚು ಥ್ರಿಲ್ ಕೊಡುತ್ತದೆ.
—
ನನ್ನ ತಂದೆ ಬದುಕಿರುವವರೆಗೂ ನಾನು ಅವರ ಜತೆಯಲ್ಲೇ ವಾಸ ಮಾಡ್ತಿದ್ದೆ. ನಾನು ಎಷ್ಟೆಲ್ಲ ಸಂಪತ್ತು ಗಳಿಸಿದೆ ಎಂಬ ಬಗ್ಗೆ ಅವರಿಗೆ ಅಷ್ಟಾಗಿ ಆಸಕ್ತಿಯಿರಲಿಲ್ಲ. ಆದರೆ ಅವರು ಕೇಳುತ್ತಿದ್ದದ್ದು, ಇಷ್ಟೆಲ್ಲ ಹಣ ಗಳಿಸಿದ ಮೇಲೆ ಸಮಾಜಕ್ಕೆ ಎಷ್ಟು ಕೊಟ್ಟೆ ಅಂತ! “ಹಣದ ಸಹಾಯ ಬೇಕು ಅಂತ ಮನೆಯ ಬಾಗಿಲು ತಟ್ಟಿದವರಿಗೆ ನೂರು ರುಪಾಯಿ ಕೊಡ್ತಿಯೋ, ಲಕ್ಷ ರುಪಾಯಿ ಕೊಡ್ತಿಯೋ ನಿನಗೆ ಬಿಟ್ಟದ್ದು. ಆದರೆ ಬರಿಗೈಲಿ ಕಳಿಸಬೇಡ” ಅಂತ ಅಪ್ಪ ಹೇಳ್ತಿದ್ರು. ನಾನು ಶ್ರೀಮಂತರ ಪಟ್ಟಿಯಲ್ಲಿದ್ದೇನೆ ಎಂಬ ಸಂಗತಿ ಅವರಿಗೆ ತಿಳಿದಾಗ ಅವರು ಹೇಳಿದ್ದು “ಹೊಸದಾಗಿ ಸೇರಿರುವ ಹಣದ ಹೀಟು ಜೋರಾಗಿರುತ್ತೆ, ಎಚ್ಚರ”.
ಫೋರ್ಬ್ಸ್ ಬಿಲಿಯನೇರ್ ಪಟ್ಟಿಯಲ್ಲಿ ನಾನಿದ್ದೇನೆ ಅಂತ ಅವರಿಗೆ ಗೊತ್ತಾದಾಗ ಅವರು ಹೇಳಿದ್ರು- “ನನಗೆ ನಿನ್ನ ಸಾಧನೆ ಬಗ್ಗೆ ಸಂತೋಷವಿದೆ. ಆದರೆ ನಿನಗೆ ಸ್ವಲ್ಪ ನಾಚಿಕೆ ಅನಿಸೋದಿಲ್ವ? ಇಷ್ಟೆಲ್ಲ ಕೋಟಿ ಡಾಲರುಗಳನ್ನು ಇಟ್ಟುಕೊಂಡು ಒಂದಿಷ್ಟನ್ನಾದರೂ ದಾನಧರ್ಮ ಮಾಡಬಾರದಾ?”
ದಾನದ ಮಹತ್ವ ತಿಳಿಸಿದವರು ನನ್ನ ತಂದೆ. ನನ್ನ ಆದಾಯದಲ್ಲಿ ಶೇಕಡ 25ನ್ನು ನಾನು ದಾನಧರ್ಮಕ್ಕೆ ಬಳಸುತ್ತೇನೆ.
—
ಬಡವರ ದೇಶದಲ್ಲಿ ಶ್ರೀಮಂತನಾಗಿರೋದರ ಬಗ್ಗೆ ನಿನಗೇನನಿಸುತ್ತದೆ ಅಂತ ಹಲವರು ನನ್ನನ್ನು ಕೇಳಿದ್ದಾರೆ. ನಮ್ಮದು ಬಡದೇಶ ಅನ್ನುವುದನ್ನು ನಾನು ಒಪ್ಪುವುದಿಲ್ಲ. 1985ರಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕ 112 ಪಾಯಿಂಟ್ ಇದ್ದದ್ದು, ಈಗ 20,000 ಮುಟ್ಟಿದೆ ಅಂದರೆ ಅದರರ್ಥ ದೇಶ ತನ್ನ ಸಮೃದ್ಧಿ ಹೆಚ್ಚಿಸಿಕೊಳ್ಳದಿದ್ದರೆ ನನ್ನ ಸಂಪತ್ತು ಬೆಳೆಯುವುದಕ್ಕೆ ಸಾಧ್ಯವಿರಲಿಲ್ಲ.
ವಿನಸ್ಟನ್ ಚರ್ಚಿಲ್ ಹೇಳಿದ್ದನ್ನು ನಾನು ಒಪ್ಪುವೆ. ಮಾನವ ಕುಲದ ಸಮಾನತೆ ಎಂಬುದು ಮಿಥ್ಯೆ, ಆದರೆ ಸಮಾನ ಅವಕಾಶ ನೀಡುವಿಕೆ ಅನ್ನೋದು ಸಾಧಿಸಬಹುದಾದ ಗುರಿ ಅಂತ. ಒಬ್ಬ ಶ್ರೀಮಂತನಾಗಿ, ದೇಶದ ಮಂದಿ ಸಮಾನ ಅವಕಾಶ ಪಡೆಯುವುದಕ್ಕೆ ಏನೆಲ್ಲ ಸಹಕರಿಸಬಹುದೋ ಅದನ್ನು ಮಾಡುತ್ತೇನೆ.
—
ರಾಕೇಶ್ ಝುಂಜುನ್ವಾಲಾ ಇಷ್ಟು ಶ್ರೀಮಂತನಾಗುವುದರ ಹಿಂದೆ ಹಿರಿಯರ ಆಶೀರ್ವಾದ, ದೇವರ ದಯೆ ಎಲ್ಲವೂ ಇದೆ. ಇವನ್ನೆಲ್ಲ ಬದುಕಲ್ಲಿ ಮರೆಯಬಾರದು. ಸಂಪತ್ತು ಬಂದಾಕ್ಷಣ ನಿಮ್ಮ ಸಮೀಪದವರನ್ನು, ಸ್ನೇಹಿತರನ್ನು, ಬಂಧುಗಳನ್ನು ನೋಡುವ ರೀತಿ ಬದಲಾಗಬಾರದು.
ಕೃಪೆ: ಹೊಸ ದಿಗಂತ
PublicNext
17/08/2022 12:08 pm