ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ವಿವೋದ ಭಾರತೀಯ ಘಟಕ ತನ್ನ ವಹಿವಾಟಿನ ಸುಮಾರು ಶೇ 50ರಷ್ಟು ಅಂದರೆ 62,476 ಕೋಟಿ ರೂ.ಗಳನ್ನು ಚೀನಾಕ್ಕೆ ರವಾನಿಸಿದೆ. ತೆರಿಗೆ ತಪ್ಪಿಸಲು ವಿವೋ ಚೀನಾಕ್ಕೆ ಹಣ ಕಳುಹಿಸಿದೆ ಎಂದು 'ಇಡಿ' ಗುರುವಾರ ಹೇಳಿದೆ.
ವಿವೊ ಮೊಬೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ 23 ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ಕಳೆದ ಮೂರು ದಿನಗಳ ಹಿಂದೆ ದಾಳಿ ಮಾಡಿತ್ತು. ಈ ವೇಳೆ ದಾಳಿ ವೇಳೆ 18 ಕಂಪನಿಗಳು ವಿವೋ ಇಂಡಿಯಾಗೆ ಅಪಾರ ಪ್ರಮಾಣದ ಹಣವನ್ನು ವರ್ಗಾಯಿಸಿರುವುದು ಕಂಡುಬಂದಿದೆ.
ವಿವೋದ ವಿವಿಧ ಘಟಕಗಳ ಸುಮಾರು 119 ಬ್ಯಾಂಕ್ ಖಾತೆಗಳಿಂದ 465 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಸುಮಾರು 66 ಕೋಟಿ ರೂ. ಮೊತ್ತದ ಎಫ್‌ಡಿ, 2 ಕೆಜಿ ಚಿನ್ನದ ಬಿಲ್ಲೆಗಳು ಮತ್ತು 73 ಲಕ್ಷ ರೂ. ನಗದನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ.
ಒಟ್ಟು ಮಾರಾಟದ ಆದಾಯ 1,25,185 ಕೋಟಿ ರೂ.ಗಳಲ್ಲಿ ವಿವೋ ಇಂಡಿಯಾ 62,476 ಕೋಟಿ ರೂ.ಗಳನ್ನು ಚೀನಾಕ್ಕೆ ರವಾನಿಸಿದೆ. ಈ ಮೂಲಕ ಭಾರತದ ವಹಿವಾಟಿನ ಶೇ 50ರಷ್ಟು ಹಣವನ್ನು ಚೀನಾಕ್ಕೆ ಕಳುಹಿಸಿದೆ. ಭಾರತದಲ್ಲಿ ತೆರಿಗೆ ಪಾವತಿಯನ್ನು ತಪ್ಪಿಸಲು, ಭಾರತೀಯ ಸಂಘಟಿತ ಕಂಪನಿಗಳಲ್ಲಿ ನಷ್ಟವನ್ನು ತೋರಿಸುವ ಸಲುವಾಗಿ ಈ ಹಣ ರವಾನೆಗಳನ್ನು ಮಾಡಲಾಗಿದೆ.
PublicNext
08/07/2022 03:58 pm