ಮುಂಬೈ: ಏಷ್ಯಾದಾದ್ಯಂತ ಐಷಾರಾಮಿ ಹೋಟೆಲ್‌ಗಳು, ಕ್ರೀಡಾಂಗಣಗಳು, ಅರಮನೆಗಳು ಮತ್ತು ಕಾರ್ಖಾನೆಗಳನ್ನು ನಿರ್ಮಿಸಿದ ಎಂಜಿನಿಯರಿಂಗ್ ಸಾಮ್ರಾಜ್ಯ ಶಾಪೂರ್ಜಿ ಪಲ್ಲೊಂಜಿ ಗ್ರೂಪ್ (ಸಿಪಿ ಗ್ರೂಪ್) ಮುಖ್ಯಸ್ಥ ಪಲ್ಲೊಂಜಿ ಮಿಸ್ತ್ರಿ ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದಾರೆ.
ದಕ್ಷಿಣ ಮುಂಬೈನ ಅವರ ನಿವಾಸದಲ್ಲಿ ಸೋಮವಾರ ಮಧ್ಯರಾತ್ರಿ ಮತ್ತು ಮಂಗಳವಾರದ ಮಧ್ಯೆ ನಿದ್ದೆಯಲ್ಲೇ ಮೃತಪಟ್ಟಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಮಿಸ್ತ್ರಿ ಟಾಟಾ ಗ್ರೂಪ್‌ನಲ್ಲಿ ಶೇ. 18.4 ಷೇರು ಹೊಂದಿರುವ ಅತೀ ದೊಡ್ಡ ವೈಯಕ್ತಿಕ ಷೇರುದಾರರು.
ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಮಿಸ್ತ್ರಿ ಅವರ ಆಸ್ತಿ ಮೌಲ್ಯ 2,900 ಕೋಟಿ ಅಮೆರಿಕದನ್ ಡಾಲರ್ ಇದೆ. ಇದರೊಂದಿಗೆ ಭಾರತದ ಅತಿ ಶ್ರೀಮಂತರ ಪಟ್ಟಿಯಲ್ಲಿ ಅವರೂ ಒಬ್ಬರಾಗಿದ್ದರು. ಅಂದಹಾಗೆ ಈ ಕುಟುಂಬದ ಬಹುತೇಕ ಆಸ್ತಿ ಏನೆಂದರೆ ಟಾಟಾ ಸನ್ಸ್ನಲ್ಲಿನ ಅತಿ ದೊಡ್ಡ ಪ್ರಮಾಣದ ಷೇರುಗಳು. ಹಾಗಂತ ಶಾಪೂರ್ಜೀ ಪಲ್ಲೋಂಜೀ ಏನೂ ಕಡಿಮೆ ಸಮೂಹವಲ್ಲ.
ಮಿಸ್ತ್ರಿ ಮತ್ತು ಅವರ ಕುಟುಂಬವು 150 ವರ್ಷಗಳ ಹಿಂದೆ ಪ್ರಾರಂಭವಾದ ಶಾಪೂರ್ಜಿ ಪಲ್ಲೊಂಜಿ ಗ್ರೂಪ್ ಅನ್ನು ನಿಯಂತ್ರಿಸುತ್ತಿದ್ದು, ಇಂದು ಕಂಪನಿ 50ಕ್ಕೂ ಹೆಚ್ಚು ದೇಶಗಳಲ್ಲಿ 50,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕಂಪನಿಯ ಹೆಗ್ಗುರುತಿನ ಯೋಜನೆಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಟ್ಟಡ ಮತ್ತು ಮುಂಬೈನಲ್ಲಿರುವ ಒಬೆರಾಯ್ ಹೋಟೆಲ್ ಮತ್ತು ಓಮನ್ ಸುಲ್ತಾನ್‌ನ ನೀಲಿ-ಚಿನ್ನ ಬಣ್ಣದ ಅಲ್ ಆಲಂ ಅರಮನೆ ನಿರ್ಮಾಣಗಳು ಸೇರಿವೆ.
PublicNext
28/06/2022 03:59 pm