ನವದೆಹಲಿ: ಮೆಟಾ ಪ್ಲಾಟ್ಫಾರ್ಮ್ ಇಂಕ್ (ಈ ಹಿಂದೆ ಫೇಸ್ಬುಕ್ ಎಂದು ಕರೆಯಲಾಗುತ್ತಿತ್ತು. ಈಗ ಹೆಸರು ಬದಲಾಗಿದೆ) ಷೇರುಗಳ ಬೆಲೆಯು ಒಂದು ದಿನದಲ್ಲಿ ದಾಖಲೆಯ ಮಟ್ಟಕ್ಕೆ ಕುಸಿದಿದ್ದರಿಂದ ಮಾರ್ಕ್ ಝುಕರ್ಬರ್ಗ್ ಆಸ್ತಿಯಲ್ಲಿ ಭಾರಿ ಇಳಿಕೆಯಾಗಿದೆ.
ಹೌದು. ಮೆಟಾ ಸ್ಟಾಕ್ ಫೆಬ್ರವರಿ 3ರಂದು ಒಂದೇ ದಿನ ಶೇ. 26ರಷ್ಟು ನೆಲ ಕಚ್ಚಿದ್ದು, ಝುಕರ್ಬರ್ಗ್ ಆಸ್ತಿ 2,900 ಕೋಟಿ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 2,16,822.85 ಕೋಟಿ) ಕರಗಿಹೋಗಿದೆ. ಈ ಮೂಲಕವಾಗಿ ಕಂಪೆನಿಯ ಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್ಬರ್ಗ್ ನಿವ್ವಳ ಆಸ್ತಿ ಮೌಲ್ಯ 8500 ಕೋಟಿ ಅಮೆರಿಕನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 6,35,515.25 ಕೋಟಿ)ಗೆ ಇಳಿದಿದೆ.
ಫೋರ್ಬ್ಸ್ನ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಗೌತಮ್ ಅದಾನಿಯ ನಿವ್ವಳ ಮೌಲ್ಯ 90.1 ಬಿಲಿಯನ್ ಡಾಲರ್ ಅಂದರೆ 9010 ಕೋಟಿ ಅಮೆರಿಕನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 6,73,646.17 ಕೋಟಿ) ಇದ್ದರೆ, ಅಂಬಾನಿ ಆಸ್ತಿ 90 ಬಿಲಿಯನ್ ಯುಎಸ್ಡಿ (ಭಾರತದ ರೂಪಾಯಿ ಲೆಕ್ಕದಲ್ಲಿ 6,72,898.50 ಕೋಟಿ) ಇದೆ. ಅಮೆರಿಕ ಮೂಲದ ಕಂಪೆನಿಯಾದ ಮೆಟಾದ ಮಾರುಕಟ್ಟೆ ಮೌಲ್ಯ ಒಂದೇ ದಿನದಲ್ಲಿ 20 ಸಾವಿರ ಕೋಟಿ ಅಮೆರಿಕನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 14,95,330 ಕೋಟಿ, ಕರ್ನಾಟಕ ಬಜೆಟ್ನ 6 ಪಟ್ಟಿಗೂ ಹೆಚ್ಚು ಮೊತ್ತ) ಕೊಚ್ಚಿ ಹೋಗಿದೆ. ಝುಕರ್ಬರ್ಗ್ಗೆ ಕಂಪೆನಿಯಲ್ಲಿ ಶೇ 12.8ರಷ್ಟು ಪಾಲಿದೆ. ಅದರ ಪರಿಣಾಮವಾಗಿಯೇ ಅವರ ಆಸ್ತಿಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಇಳಿಕೆ ಆಗಿದೆ.
ಆದರೆ, ಇಂಥ ನಷ್ಟದಲ್ಲೂ ಝುಕರ್ಬರ್ಗ್ ವಿಚಿತ್ರ ದಾಖಲೆ ಬರೆದಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಟೆಸ್ಲಾ ಕಂಪೆನಿಯ ಎಲಾನ್ ಮಸ್ಕ್ ಅವರಿಗೆ ಒಂದೇ ದಿನದಲ್ಲಿ 3500 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿತ್ತು. ಇದು ಕಾಗದದ ಮೇಲಿನ ಲೆಕ್ಕಾಚಾರ. ಏಕೆಂದರೆ, ಶ್ರೀಮಂತಿಕೆ ಎಂಬುದಕ್ಕೆ ಅಳತೆಗೋಲಾಗಿ ಅವರ ಬಳಿ ಇರುವ ಷೇರಿನ ಮೌಲ್ಯವನ್ನೇ ಮುಖ್ಯವಾಗಿ ಪರಿಗಣಿಸಲಾಗುತ್ತದೆ. ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾದ ಮಸ್ಕ್ ತಮ್ಮ ಶೇ 10ರಷ್ಟು ಟೆಸ್ಲಾ ಷೇರನ್ನು ಮಾರಾಟ ಮಾಡಬೇಕೇ ಎಂಬ ಬಗ್ಗೆ ಟ್ವಿಟರ್ನಲ್ಲಿ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿ ಕೇಳಿದ್ದರು. ಇದಾದ ನಂತರ ಭಾರೀ ಪ್ರಮಾಣದಲ್ಲಿ ಬೆಲೆ ಇಳಿಕೆ ಆಯಿತು. ಅದಾದಾ ಮೇಲೆ ಮಾರಾಟದಿಂದ ಇನ್ನೂ ಟೆಸ್ಲಾ ಷೇರುಗಳು ಚೇತರಿಸಿಕೊಳ್ಳಬೇಕಿದೆ.
PublicNext
04/02/2022 04:54 pm