ನವದೆಹಲಿ: ಭಾರತದ ಪ್ರಮುಖ ದೂರ ಸಂಪರ್ಕ ಸೇವಾದಾರ ಕಂಪನಿ ಭಾರ್ತಿ ಏರ್‌ಟೆಲ್ ಮತ್ತು ಜಾಗತಿಕ ಟೆಕ್ ಕಂಪನಿ ಗೂಗಲ್ ನಡುವೆ ಮುಂದಿನ ಐದು ವರ್ಷಗಳ ಅವಧಿಗೆ ವಾಣಿಜ್ಯ ಒಪ್ಪಂದವೇರ್ಪಟ್ಟಿದ್ದು, ಒಂದು ಬಿಲಿಯನ್ ಡಾಲರ್ ಹೂಡಿಕೆಗೆ ಗೂಗಲ್ ಮುಂದಾಗಿದೆ.
ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಷನ್ ಫಂಡ್ ಭಾಗವಾಗಿ ಗೂಗಲ್ ಈ ಮೊತ್ತವನ್ನು ಹೂಡಿಕೆ ಮಾಡಲಿದೆ. ಭಾರ್ತಿ ಏರ್‌ಟೆಲ್‌ನಲ್ಲಿ ಹೂಡಿಕೆ ಮಾಡುವ ಮೂಲಕ ದೇಶದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಎರಡರಲ್ಲೂ ಹೂಡಿಕೆ ಮಾಡಿದ ಸಂಸ್ಥೆ ಗೂಗಲ್ ಎನಿಸಿಕೊಂಡಿದೆ. 700 ಮಿಲಿಯನ್ ಡಾಲರ್ ಈಕ್ವಿಟಿ ಹೂಡಿಕೆ (ಪ್ರತಿ ಷೇರಿಗೆ ರೂ. 734) ಮತ್ತು 300 ಮಿಲಿಯನ್ ಡಾಲರ್ ವಾಣಿಜ್ಯ ಒಪ್ಪಂದ ಜಾರಿಗೆ ಆಗುತ್ತದೆ. ಇದರಲ್ಲಿ ಏರ್ಟೆಲ್ನ ಕೊಡುಗೆಗಳನ್ನು ಹೆಚ್ಚಿಸುವುದಕ್ಕೆ ಹೂಡಿಕೆ ಜಾಸ್ತಿ ಮಾಡಲಾಗುತ್ತದೆ. ಭಾರತದ ಡಿಜಿಟಲ್ ಎಕೋಸಿಸ್ಟಮ್ನಾದ್ಯಂತ ಸಂಪರ್ಕ ಮತ್ತು ಡಿಜಿಟಲ್ ಒಳಗೊಳ್ಳುವ ಗುರಿಯನ್ನು ಇರಿಸಿಕೊಳ್ಳಲಾಗಿದೆ.
ಭಾರ್ತಿ ಏರ್‌ಟೆಲ್ ಅಧ್ಯಕ್ಷರಾದ ಸುನೀಲ್ ಭಾರ್ತಿ ಮಿತ್ತಲ್ ಮಾತನಾಡಿ, ಭಾರತದ ಡಿಜಿಟಲ್ ವ್ಯವಸ್ಥೆಯನ್ನು ಹೊಸ ಉತ್ಪನ್ನಗಳ ಮೂಲಕ ಬೆಳೆಸಲು ಏರ್‌ಟೆಲ್ ಮತ್ತು ಗೂಗಲ್ ದೃಷ್ಟಿಕೋನ ಹಂಚಿಕೊಳ್ಳುತ್ತದೆ. ಭವಿಷ್ಯಕ್ಕೆ ಸಿದ್ಧವಾಗಿರುವ ನೆಟ್ವರ್ಕ್, ಡಿಜಿಟಲ್ ಪ್ಲಾಟ್ಫಾರ್ಮ್ಗಳು, ಕೊನೆ- ಹಂತದ ವಿತರಣೆ ಮತ್ತು ಪಾವತಿ ಎಕೋಸಿಸ್ಟಮ್ ಇವೆಲ್ಲದರಲ್ಲಿ ನಾವು ಗೂಗಲ್ ಜತೆಗೆ ಹತ್ತಿರವಾಗಿ ಕೆಲಸ ಮಾಡಲು, ಆ ಮೂಲಕ ಡಿಜಿಟಲ್ ಎಕೋಸಿಸ್ಟಮ್ನ ಆಳ ಹಾಗೂ ಅಗಲವನ್ನು ವಿಸ್ತರಿಸಲು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
PublicNext
29/01/2022 08:45 am