ಏರ್ ಇಂಡಿಯಾ ಸಂಸ್ಥೆಯನ್ನು ಹಳೆಯ ಮಾಲೀಕ ಟಾಟಾ ಗ್ರೂಪ್ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಹೌದು ಸಾಲದ ಸುಳಿಯಿಂದ ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಏರ್ ಇಂಡಿಯಾದ ಉಕ್ಕಿನ ಹಕ್ಕಿಗಳ ಹೊಣೆಯನ್ನ ಯಾರು ಹೊತ್ತುಕೊಳ್ಳುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿತ್ತು. ಇದೀಗ ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹರಾಜಿನಲ್ಲಿ ಟಾಟಾ ಸಮೂಹ ಸಂಸ್ಥೆ ಏರ್ ಇಂಡಿಯಾವನ್ನು ಖರೀದಿಸಿದೆ.
ಇಂದು ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಖರೀದಿ ಸಂಬಂಧ ಹರಾಜು ನಡೆಸಲಾಯಿತು.ಈ ಹರಾಜು ಪ್ರಕ್ರಿಯೆಯಲ್ಲಿ ಹಲವಾರು ಸಂಸ್ಥೆಗಳು ಭಾಗಿಯಾಗಿದ್ದವು. ಅಂತಿಮವಾಗಿ ಟಾಟಾ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ಏರ್ ಇಂಡಿಯಾ ಈ ಹಿಂದೆ ಟಾಟಾ ಗ್ರೂಪ್ ನದ್ದೇ ಕಂಪನಿಯಾಗಿತ್ತು. ಈ ಕಂಪನಿಯನ್ನು ಜೆಆರ್ ಡಿ ಟಾಟಾ 1932 ರಲ್ಲಿ ಸ್ಥಾಪಿಸಿದ್ದರು. ಸ್ವಾತಂತ್ರ್ಯಾನಂತರ, ವಾಯುಯಾನ ವಲಯವನ್ನು ರಾಷ್ಟ್ರೀಕರಣಗೊಳಿಸಲಾಯಿತು ಮತ್ತು ಸರ್ಕಾರವು ಟಾಟಾ ಏರ್ ಲೈನ್ಸ್ ಷೇರುಗಳಲ್ಲಿ ಶೇಕಡಾ 49 ರಷ್ಟನ್ನು ಖರೀದಿಸಿತು. ನಂತರ ಕಂಪನಿಯು ಸಾರ್ವಜನಿಕ ಸೀಮಿತ ಕಂಪನಿಯಾಯಿತು ಮತ್ತು ಜುಲೈ 29, 1946 ರಂದು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು.
1953 ರಲ್ಲಿ, ಸರ್ಕಾರವು ಏರ್ ಕಾರ್ಪೊರೇಷನ್ ಕಾಯ್ದೆಯನ್ನು ಅಂಗೀಕರಿಸಿತು ಮತ್ತು ಕಂಪನಿಯ ಸ್ಥಾಪಕ ಜೆಆರ್ ಡಿ ಟಾಟಾ ಅವರಿಂದ ಮಾಲೀಕತ್ವದ ಹಕ್ಕುಗಳನ್ನು ಖರೀದಿಸಿತು. ನಂತರ ಈ ಕಂಪನಿಯನ್ನು ಏರ್ ಇಂಡಿಯಾ ಇಂಟರ್ ನ್ಯಾಷನಲ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು. ಹೀಗಾಗಿ ಟಾಟಾ ಗ್ರೂಪ್ 68 ವರ್ಷಗಳ ನಂತರ ಮತ್ತೊಮ್ಮೆ ತನ್ನ ಸ್ವಂತ ಕಂಪನಿಯನ್ನು ಹಿಂತೆಗೆದುಕೊಂಡಂತಾಗಿದೆ.
PublicNext
01/10/2021 02:58 pm