ನವದೆಹಲಿ: ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮಾಟೊದಿಂದ ಸಹ-ಸಂಸ್ಥಾಪಕ ಗೌರವ್ ಗುಪ್ತಾ ಕಂಪನಿಯನ್ನು ತೊರೆಯಲು ನಿರ್ಧರಿಸಿದ್ದಾರೆ.
ಈ ಸಂಬಂಧ ಗೌರವ್ ಗುಪ್ತಾ ಅವರು ಇಂದು ಮುಂಜಾನೆ ತಮ್ಮ ಸಹೋದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದಾರೆ. 'ಒಂದು ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವುದರಿಂದ ಜೀವನದಲ್ಲಿ ಈ ಹೊಸ ತಿರುವು ಅಗತ್ಯವಿದೆ' ಎಂದು ಗುಪ್ತಾ ತಿಳಿಸಿದ್ದಾರಂತೆ.
ಜೊಮಾಟೊ ಪೂರೈಕೆಯ ಮುಖ್ಯಸ್ಥರಾಗಿದ್ದ ಗೌರವ್ ಗುಪ್ತಾ, ಆರು ವರ್ಷಗಳ ಹಿಂದೆ ಅಂದ್ರೆ 2015ರಲ್ಲಿ ಸಂಸ್ಥೆಯನ್ನು ಸೇರಿಕೊಂಡರು. ಬಳಿಕ 2019ರಲ್ಲಿ ಸಹ-ಸಂಸ್ಥಾಪಕರಾಗಿ ಗುರುತಿಸಿಕೊಂಡರು. ಜಾಹೀರಾತು ಮತ್ತು ಮಾರಾಟದ ಜೊತೆಯಲ್ಲಿ ಜೊಮಾಟೊನ ಪ್ರೀಮಿಯಂ ಸದಸ್ಯತ್ವ ಚಂದಾದಾರಿಕೆಯನ್ನು ನಿರ್ಮಿಸುವಲ್ಲಿ ಸಹ ಗೌರವ್ ಗುಪ್ತಾ ಪ್ರಮುಖ ಪಾತ್ರ ವಹಿಸಿದ್ದಾರೆ.
"ನನ್ನ ಜೀವನದಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತಿರುವೆ ಮತ್ತು ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ. ಜೊಮಾಟೊವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ನಮ್ಮಲ್ಲಿ ಈಗ ಉತ್ತಮ ತಂಡವಿದೆ. ನನ್ನ ಪ್ರಯಾಣದಲ್ಲಿ ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳುವ ಸಮಯ ಈಗ ಬಂದಿದೆ. ಇದನ್ನು ತಿಳಿಸಲು ನಾನು ತುಂಬಾ ಭಾವುಕನಾಗಿದ್ದೇನೆ"ಎಂದು ಗುಪ್ತಾ ತಮ್ಮ ಸಹೋದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದ್ದಾರೆ.
PublicNext
14/09/2021 03:27 pm