ಸ್ಯಾನ್ ಫ್ರ್ಯಾನ್ಸಿಸ್ಕೊ: ವಾಣಿಜ್ಯ ವಿಚಾರಗಳಲ್ಲಿ ತಮ್ಮ ನೇರ ಆಫರ್‌ಗಳಿಂದಲೇ ಪ್ರಖ್ಯಾತಿ ಪಡೆದುಕೊಂಡಿರುವ ವಿಶ್ವದ ಶ್ರೀಮಂತ ವ್ಯಕ್ತಿ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್, ಈಗ ಸಾಮಾಜಿಕ ಮಾಧ್ಯಮದ ಅತಿ ದೊಡ್ಡ ವೇದಿಕೆ ಎನಿಸಿಕೊಂಡಿರುವ ಟ್ವಿಟರ್ ಬುಡಕ್ಕೆ ಕೈಹಾಕಿದ್ದಾರೆ. ಅಳೆದು ತೂಗಿ ಯಾವುದೇ ಆಫರ್‌ಗಳಿಲ್ಲ, ನೇರವಾಗಿ 41 ಬಿಲಿಯನ್ ಡಾಲರ್ ಮೊತ್ತವನ್ನು ಕ್ಯಾಶ್‌ನಲ್ಲಿ ಕೊಡ್ತೇನೆ, ಇಡೀ ಟ್ವಿಟರ್ ಕಂಪನಿಯನ್ನು ಕೊಡ್ತೀರಾ ಎಂದು ಕಂಪನಿಗೆ ಕೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ನ ಆಡಳಿತ ಮಂಡಳಿಗೆ ಸೇರಲು ಎಲಾನ್ ಇತ್ತೀಚೆಗಷ್ಟೇ ನಿರಾಕರಿಸಿದ್ದರು. ಟ್ವಿಟರ್‌ನ ಪ್ರತಿ ಷೇರಿಗೆ 54.20 ಡಾಲರ್ (4,124.81 ರೂ.) ಕೊಡುವುದಾಗಿ ಎಲಾನ್ ಮಸ್ಕ್ ಷೇರುಪೇಟೆ ನಿಯಂತ್ರಣ ಮಂಡಳಿಗೆ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ. ಪ್ರಸ್ತುತ ಟ್ವಿಟರ್‌ನ ಪ್ರತಿ ಷೇರು 45.85 ಡಾಲರ್‌ಗಳಲ್ಲಿ (3,489.35 ರೂ.) ವಹಿವಾಟು ನಡೆದಿದೆ.
"ನನ್ನ ಹೂಡಿಕೆಯನ್ನು ಮಾಡಿದ ನಂತರ ಕಂಪನಿಯು ಅಭಿವೃದ್ಧಿ ಹೊಂದುವುದಿಲ್ಲ ಅಥವಾ ಅದರ ಪ್ರಸ್ತುತ ರೂಪದಲ್ಲಿ ಈ ಸಾಮಾಜಿಕ ಅಗತ್ಯವನ್ನು ಪೂರೈಸುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಟ್ವಿಟರ್ ಅನ್ನು ಖಾಸಗಿ ಕಂಪನಿಯಾಗಿ ಪರಿವರ್ತಿಸುವ ಅಗತ್ಯವಿದೆ. ನನ್ನ ಪ್ರಸ್ತಾಪವು ನನ್ನ ಅತ್ಯುತ್ತಮ ಮತ್ತು ಅಂತಿಮ ಆಫರ್. ಹಾಗೇನಾದರೂ ನಿಮಗೆ ಇದು ಸ್ವೀಕಾರವಾಗದೇ ಇದ್ದಲ್ಲಿ, ನಾನು ಷೇರುದಾರನಾಗಿ ನನ್ನ ಸ್ಥಾನವನ್ನು ಮರುಪರಿಶೀಲಿಸಬೇಕಾಗಿದೆ ಎಂದು ಮಸ್ಕ್ ಟ್ವಿಟರ್ ಅಧ್ಯಕ್ಷ ಬ್ರೆಟ್ ಟೇಲರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
2009ರಲ್ಲಿ ಟ್ವಿಟರ್‌ಗೆ ಸೇರಿದಾಗಿನಿಂದ ಮಸ್ಕ್ 80 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಟ್ವಿಟರ್‌ನ ವೇದಿಕೆಯನ್ನು ತಮ್ಮ ಹಲವಾರು ಪ್ರಕಟಣೆಗಳನ್ನು ಘೋಷಣೆ ಮಾಡಲು ಮಸ್ಕ್ ಬಳಸಿಕೊಂಡಿದ್ದರು. ಟೆಸ್ಲಾ ವಿಚಾರವಾಗಿ ಅವರು ಮಾಡಿದ ಒಂದು ಪ್ರಕರಣೆಯು ಮಾರ್ಕೆಟ್ ರೆಗ್ಯುಲೇಟರ್ ಜೊತೆಗಿನ ಸಂಘರ್ಷಕ್ಕೂ ಕಾರಣವಾಗಿತ್ತು.
PublicNext
14/04/2022 06:52 pm