ಚೆನ್ನೈ: ಹಸಿದು ಬಂದವರಿಗೆ 1 ರೂ.ಗೆ ಒಂದು ಇಡ್ಲಿ ಕೊಟ್ಟು ಹೊಟ್ಟೆ ತುಂಬಿಸುತ್ತಿರುವ 'ಇಡ್ಲಿ ಅಮ್ಮ'ನಿಗೆ ವಿಶ್ವ ತಾಯಂದಿರ ದಿನದಂದು ಉದ್ಯಮಿ ಆನಂದ್ ಮಹೀಂದ್ರಾ ಅವರು ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ತಮಿಳುನಾಡಿನ ಪೆರು ಸನಿಹದ ವಡಿವೇಲಪಾಳ್ಯಂನಲ್ಲಿ 'ಇಡ್ಲಿ ಅಮ್ಮ' ಎಂದೇ ಪ್ರಸಿದ್ಧವಾಗಿರುವ ಎಂ.ಕಮಲಾಥಲ್ ಅವರಿಗೆ ತಾಯಂದಿರ ದಿನಕ್ಕೆ ವಿಶೇಷ ಉಡುಗೊರೆ ಸಿಕ್ಕಿದೆ. ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡಿಕೊಂಡಿದ್ದ ಇಡ್ಲಿ ಅಮ್ಮನ ಬಗ್ಗೆ ಆನಂದ್ ಅವರು 2019ರಲ್ಲಿ ಟ್ವೀಟ್ ಮಾಡಿದ್ದು, ಅವರಿಗೆ ಮನೆ ಕೊಡುವುದಾಗಿ ಹೇಳಿದ್ದರು. ಇದೀಗ ತಮ್ಮ ಮಾತನ್ನು ಸತ್ಯ ಮಾಡಿದ್ದಾರೆ.
ಹೊಸ ಮನೆಗೆ ಪ್ರವೇಶಿಸುವ ವಿಡಿಯೋವನ್ನು ಆನಂದ್ ಮಹೀಂದ್ರಾ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ಮನೆ ನಿರ್ಮಾಣ ಕೆಲಸದಲ್ಲಿ ನಮ್ಮ ತಂಡ ಸರಿಯಾಗಿ ಶ್ರಮಿಸಿದ್ದರಿಂದ ವಿಶ್ವ ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಮನೆ ಉಡುಗೊರೆ ನೀಡಲು ಸಾಧ್ಯವಾಯಿತು. ಈ ತಾಯಿ ಹಾರೈಕೆ, ಕಾಳಜಿ ಹಾಗೂ ನಿಸ್ವಾರ್ಥತೆಯ ಸಂಗಮವಾಗಿದ್ದು, ಅವರ ಕಾರ್ಯಕ್ಕೆ ಬೆಂಬಲ ನೀಡಲು ಅವಕಾಶ ದೊರೆತಿದೆ' ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿ ತಾಯಂದಿರ ದಿನದ ಶುಭಾಶಯ ತಿಳಿಸಿದ್ದಾರೆ.
PublicNext
09/05/2022 11:46 am