ನವದೆಹಲಿ: ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಯಂತ್ರಣ ಹೇರಬೇಕೇ, ಬೇಡವೇ ಎಂಬ ವಿಷಯ ಇತ್ತೀಚಿಗೆ ಸಾಕಷ್ಟು ಚರ್ಚೆಗೆ ಬರುತ್ತಿದೆ. ಈ ನಡುವೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆ ಮಂಡನೆ ಆಗುವ ಸಾಧ್ಯತೆಯಿದೆ.
ದೇಶದಲ್ಲಿ ಇನ್ನೂ ಅನಿಯಂತ್ರಿತವಾಗಿರುವ ಕ್ರಿಪ್ಟೋಕರೆನ್ಸಿಗಳ ಮೇಲೆ ಯಾವ ನಿಲುವು ಹೊಂದಬೇಕು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಕ್ರಿಪ್ಟೋಕರೆನ್ಸಿ ಮಸೂದೆ ನಿಯಂತ್ರಣದ ಪರಿಮಿತಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸುದೀರ್ಘ ಚರ್ಚೆ ಮೂಲಕ ಸೂಕ್ತ ಬದಲಾವಣೆ ತರುವುದಕ್ಕಾಗಿ ಸಂಸತ್ತಿನಲ್ಲಿ ಮಸೂದೆ ಮಂಡಿಸುವುದು ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ.
ಕ್ರಿಪ್ಟೋಕರೆನ್ಸಿಯ ನಿಯಂತ್ರಣದ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, "ನಾವು ಸಾಮಾಜಿಕ ಮಾಧ್ಯಮ ಮತ್ತು ಕ್ರಿಪ್ಟೋಕರೆನ್ಸಿಗಳಂತಹ ಉದಯೋನ್ಮುಖ ತಂತ್ರಜ್ಞಾನಗಳಿಗೆ ಜಾಗತಿಕ ಮಾನದಂಡಗಳನ್ನು ಜಂಟಿಯಾಗಿ ರೂಪಿಸಬೇಕಿದೆ. ಆದ್ದರಿಂದ ಅದನ್ನು ಪ್ರಜಾಪ್ರಭುತ್ವ ಸಬಲೀಕರಣಗೊಳಿಸಲು ಬಳಸಲಾಗುತ್ತದೆಯೇ ವಿನಃ ದುರ್ಬಲಗೊಳಿಸಲು ಅಲ್ಲ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸರ್ಕಾರವು ಚಳಿಗಾಲದ ಅಧಿವೇಶನದ ಆರಂಭದ ಮೊದಲು, ಕ್ಯಾಬಿನೆಟ್ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರತಿನಿಧಿಗಳ ಸಭೆಯ ನಂತರ, ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕಾಗಿ ಡಿಜಿಟಲ್ ಕರೆನ್ಸಿ ಬಿಲ್, 2021ರ ಬಗ್ಗೆ ಸೂಚಿಸಿತ್ತು.
ಕ್ರಿಪ್ಟೋಕರೆನ್ಸಿ ನಿಯಂತ್ರಣದ ಕುರಿತು ಕೇಂದ್ರ ಸರ್ಕಾರದ ನಿಲುವು:
* ಭಾರತದಲ್ಲಿ ಅನಿಯಂತ್ರಿತ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದ ಆರ್‌ಬಿಐ ಸೇರಿದಂತೆ ಮಧ್ಯಸ್ಥಗಾರರ ನಡುವೆ ಗುರುವಾರ ನಡೆದ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅಂತಿಮ ತೀರ್ಮಾನ ತೆಗೆದುಕೊಂಡಿದ್ದಾರೆ. ಎಕನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ, "ಖಾಸಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ಸಂಪೂರ್ಣ ನಿಷೇಧ, ಭಾಗಶಃ ನಿಷೇಧ, ನಿಯಂತ್ರಣದೊಂದಿಗೆ ಎಲ್ಲಾ ವರ್ಗದ ಕ್ರಿಪ್ಟೋ ಕರೆನ್ಸಿಗಳಿಗೆ ಅವಕಾಶ ನೀಡುವುದು ಅಥವಾ ಕೆಲವು ಆಯ್ದ ಕೆಲವು ನಿಯಮಾವಳಿಗಳನ್ನು ಅಳವಡಿಸುವುದಕ್ಕೆ ನಿರ್ಧರಿಸಲಾಗಿದೆ.
* ಸರ್ಕಾರವು ವಿನಿಮಯದಿಂದ ವರ್ಗಾವಣೆಗಳ ಮೇಲಿನ ನಿರ್ಬಂಧಗಳನ್ನು ಪರಿಗಣಿಸುತ್ತಿರಬಹುದು. ವ್ಯಾಪಾರ ವಹಿವಾಟಿನ ಮೇಲೆ ಸಂಪೂರ್ಣ ನಿಷೇಧವನ್ನು ನಿರೀಕ್ಷಿಸಲಾಗಿದೆ. ವ್ಯಾಪಾರಿಗಳ ಗುರುತನ್ನು ಮರೆಮಾಚುವ ವ್ಯಾಲೆಟ್‌ಗಳು ಮತ್ತು Google Chrome ವಿಸ್ತರಣೆ ಅನ್ನು ನಿರ್ಬಂಧಿಸಲಾಗುತ್ತದೆ. ವಹಿವಾಟುಗಳ ಮೇಲೆ ಕಣ್ಣಿಡಲು ಸರ್ಕಾರವು ತನ್ನದೇ ರೀತಿಯಲ್ಲಿ ನಿಗಾ ವಹಿಸುವುದಕ್ಕೆ ವ್ಯಾಲೆಟ್ ಅನ್ನು ತೆರೆಯಬಹುದು.
* ಕ್ರಿಪ್ಟೋಕರೆನ್ಸಿಗಳ ವಿನಿಮಯದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ತ್ರೈಮಾಸಿಕ ವರದಿ ಬಹಿರಂಗಪಡಿಸುವುದಕ್ಕೆ ಅವಕಾಶ ನೀಡುತ್ತದೆ. ಭಾರತೀಯ ಕ್ರಿಪ್ಟೋ ವಿನಿಮಯ ಕೇಂದ್ರಗಳಲ್ಲಿ ಭಾರತೀಯ ರೂಪಾಯಿಯ ಎಲ್ಲಾ ಒಳ ಮತ್ತು ಹೊರ ಹೋಗುವ ವಹಿವಾಟಿನ ಮೇಲೆ ನಿಗಾ ವಹಿಸಬೇಕಾಗುತ್ತದೆ. ಅದರ ಮೇಲ್ವಿಚಾರಣೆ ಮಾಡಲು ಸೂಕ್ತ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಯೋಚಿಸುತ್ತಿದೆ. ತ್ರೈಮಾಸಿಕ ಆಧಾರದ ಮೇಲೆ ಸರ್ಕಾರಕ್ಕಾಗಿ ತಮ್ಮ ಲೆಡ್ಜರ್‌ಗಳನ್ನು ತೆರೆಯಬಹುದಾದ ವಿನಿಮಯ ಕೇಂದ್ರಗಳಿಗೆ ಮಾತ್ರ ದೇಶದಲ್ಲಿ ಅನುಮತಿ ನೀಡಲಾಗುತ್ತದೆ.
* ಕ್ರಿಪ್ಟೋ ವಹಿವಾಟುಗಳನ್ನು ಮೇಲ್ವಿಚಾರಣೆ ಮಾಡಲು ಬಂಡವಾಳ ಮಾರುಕಟ್ಟೆ ನಿಯಂತ್ರಕರನ್ನು ನೇಮಿಸಲು ಭಾರತವು ಚಿಂತಿಸುತ್ತಿದೆ. ಹೊಸ ನಿಯಮಗಳನ್ನು ಅನುಸರಿಸಲು ಕ್ರಿಪ್ಟೋಕರೆನ್ಸಿ ಹೊಂದಿರುವವರು ತಮ್ಮ ಆಸ್ತಿಯನ್ನು ಘೋಷಿಸಲು ಕೇಂದ್ರ ಸರ್ಕಾರ ಗಡುವು ನೀಡುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ ನಿಯಮವನ್ನು ಉಲ್ಲಂಘಿಸುವವರಿಗೆ 200 ಮಿಲಿಯನ್ ರೂಪಾಯಿಗಳಷ್ಟು ದಂಡ ವಿಧಿಸಬಹುದು ಅಥವಾ 1.5 ವರ್ಷಗಳವರೆಗೆ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಕ್ರಿಪ್ಟೋಕರೆನ್ಸಿಗಳನ್ನು 'ಕ್ರಿಪ್ಟೋ ಆಸ್ತಿಗಳು' ಎಂದು ಉಲ್ಲೇಖಿಸಬಹುದು. ಇಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಪ್ರಾರಂಭಿಸುವ RBI ಯೋಜನೆ ಬಗ್ಗೆ ಉಲ್ಲೇಖವಿಲ್ಲ.
* ದೇಶದ ಎಲ್ಲಾ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಪ್ರಸ್ತಾಪಿಸಿದ ಮಸೂದೆಯನ್ನು ಸರ್ಕಾರ ಪರಿಷ್ಕರಿಸಿದೆ. ಅದಾಗ್ಯೂ, ಬಿಟ್‌ಕಾಯಿನ್ ಅನ್ನು ದೇಶದಲ್ಲಿ ಅಧಿಕೃತ ಕರೆನ್ಸಿಯಾಗಿ ಪರಿಗಣಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಸಂಸತ್ತಿನಲ್ಲಿ ಮುಂದೆ ಮಂಡನೆ ಆಗಲಿರುವ ಕ್ರಿಪ್ಟೋಕರೆನ್ಸಿ ಮಸೂದೆ ಬಗ್ಗೆ ಯಾವುದೇ ಊಹಾಪೋಹಗಳು ಬೇಕಿಲ್ಲ. ಸಂಸತ್ತಿಗೆ ಪರಿಚಯಿಸುವ ಮೊದಲು ಸರ್ಕಾರವು ಉತ್ತಮ ಸಮಾಲೋಚನೆಯನ್ನು ನಡೆಸಿ ಮಸೂದೆ ಸಿದ್ಧಪಡಿಸುತ್ತದೆ ಎಂದು ಸೀತಾರಮನ್ ಈಗಾಗಲೇ ಹೇಳಿದ್ದಾರೆ.
ದೇಶದಲ್ಲಿ ನಿರ್ಬಂಧದ ಬದಲಿಗೆ ನಿಯಂತ್ರಣ:
ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರುವುದರ ಬದಲಿಗೆ ನಿಯಂತ್ರಣ ಸಾಧಿಸುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂಬುದು ಸಾಕಷ್ಟು ಸುದ್ದಿಯಾಗಿತ್ತು. "ಕ್ರಿಪ್ಟೋಕರೆನ್ಸಿಗಳು ದುರುಪಯೋಗವಾಗದಂತೆ ನಿಯಂತ್ರಿಸುವ ಕಾರ್ಯ ವಿಧಾನವು ಜಾರಿಯಲ್ಲಿರುತ್ತದೆ. ಕ್ರಿಪ್ಟೋಕರೆನ್ಸಿ ಮೂಲಕ ನಡೆಯುತ್ತಿರುವ ಭೂಗತ ವಹಿವಾಟುಗಳ ಬಗ್ಗೆ ಸರ್ಕಾರವು ಕಾಳಜಿ ವಹಿಸುತ್ತದೆ. ವಿಶೇಷವಾಗಿ 'ಹವಾಲಾ' ಮತ್ತು ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದಕ್ಕೆ ಕ್ರಿಪ್ಟೋಕರೆನ್ಸಿಗಳ ಪಾತ್ರ ಎಷ್ಟಿದೆ ಎಂಬುದರ ಬಗ್ಗೆ ಲಕ್ಷ್ಯ ವಹಿಸಲಾಗುತ್ತದೆ. ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ನಿಯಂತ್ರಿಸಲಾಗುತ್ತದೆಯೇ ವಿನಃ ಸಂಪೂರ್ಣವಾಗಿ ನಿಷೇಧಿಸಲಾಗುವುದಿಲ್ಲ ಎಂದು ತಜ್ಞರು ಊಹಿಸಿದ್ದರು.
ಏನಿದು ಕ್ರಿಪ್ಟೋಕರೆನ್ಸಿ, ಹೇಗಿದರ ವಹಿವಾಟು?:
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ ಆಗಿದೆ. ಈ ಕ್ರಿಪ್ಟೋ ಕರೆನ್ಸಿಗೆ ಯಾವುದೇ ರೀತಿಯ ಮುದ್ರಣ ರೂಪ ಇರುವುದಿಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕ್ ಇದ್ಯಾವುದು ಇರುವುದಿಲ್ಲ.
ಕ್ರಿಪ್ಟೋಕರೆನ್ಸಿಗಳ ಮೇಲೆ ಹೂಡಿಕೆಗೆ ಜಗತ್ತಿನ ಬಹುತೇಕ ರಾಷ್ಟ್ರಗಳು ನಿಯಂತ್ರಣ ಹೇರಿವೆ. ಹೀಗಿದ್ದರೂ ಪ್ರಮುಖ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲಿ ಏರಿಕೆ ಮುಂದುವರಿದಿದೆ. ಕ್ರಿಪ್ಟೋಕರೆನ್ಸಿಗಳ ಖರೀದಿ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಭಾರತದಲ್ಲಿ ಆರ್‌ಬಿಐ ನಿರ್ದೇಶನವಿದ್ದರೂ ಕ್ರಿಪ್ಟೋಕರೆನ್ಸಿಗಳ ಮೇಲೆ ಭಾರತೀಯರ ಹೂಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಭಾರತೀಯರೇ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ ಅನೇಕ ಕ್ರಿಪ್ಟೋಕರೆನ್ಸಿಗಳ ದರಗಳು ಇಳಿಕೆಯಾಗಿದ್ದರೂ ಹಣದ ಹೂಡಿಕೆ ಪ್ರಮಾಣ ಮೊದಲಿಗಿಂತ ಏರಿಕೆಯಾಗುತ್ತಿದೆ.
ಕೃಪೆ: ಒನ್ಇಂಡಿಯಾ ಕನ್ನಡ
PublicNext
11/12/2021 02:34 pm