ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: "ರೈತರ ಪಹಣಿಯಲ್ಲಿನ ವಕ್ಫ್ ಮಂಡಳಿ ನಮೂದು ತಕ್ಷಣ ತೆಗೆಯಬೇಕು, ಇಲ್ಲದಿದ್ದಲ್ಲಿ ನಿರಂತರ ಹೋರಾಟ"

ಬೀದರ್: ರೈತರ ಪಹಣಿಯಲ್ಲಿನ ವಕ್ಫ್ ಮಂಡಳಿ ಎಂದು ನಮೂದು ಮಾಡಿರುವ ಹೆಸರನ್ನು ತಕ್ಷಣದಲ್ಲಿ ತೆಗೆಯಬೇಕು, ಇಲ್ಲದಿದ್ದಲ್ಲಿ ನಿರಂತರವಾಗಿ ಹೋರಾಟಗಳು ಅನಿವಾರ್ಯ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್‌ ಎಚ್ಚರಿಸಿದ್ದಾರೆ.

ಜಮೀನುಗಳಲ್ಲಿ ವಕ್ಫ್ ಮಂಡಳಿ ನಮೂದಾಗಿರುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಸೋಮವಾರ ಜಿಲ್ಲಾ ರೈತ ಸಂಘ ಮತ್ತು ಜಿಲ್ಲಾ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮಠಾಧೀಶರು ಮತ್ತು ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರು ಭಾಗವಹಿಸಿ ಬೆಂಬಲ ಸೂಚಿಸಿದರು.

"ವಕ್ಫ್‌ ಹಟಾವೋ, ಕಿಸಾನ್‌ ಬಚಾವೋ" ಘೋಷವಾಕ್ಯದಡಿ ರೈತ ಸಂಘ ಕರೆ ಕೊಟ್ಟಿದ್ದ ಪ್ರತಿಭಟನೆಯನ್ನು ಬೆಂಬಲಿಸಿ ಬಿಜೆಪಿ, ಶ್ರೀರಾಮ ಸೇನೆ, ಹಿಂದೂ ಬ್ರಿಗೇಡ್‌ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಜಿಲ್ಲೆಯ ವಿವಿಧ ಭಾಗದ ಸ್ವಾಮೀಜಿಗಳು ಕೂಡ ಭಾಗವಹಿಸಿ ಬೆಂಬಲ ಸೂಚಿಸಿದರು. ತಾಲ್ಲೂಕಿನ ಚಟ್ನಳ್ಳಿ, ಧರ್ಮಾಪುರ ಸೇರಿದಂತೆ ಇತರೆ ಹಳ್ಳಿಗಳ ಗ್ರಾಮಸ್ಥರೂ ಭಾಗವಹಿಸಿದ್ದರು.

ನಗರದ ಗಣೇಶ ಮೈದಾನದಿಂದ ಆರಂಭಗೊಂಡ ಪ್ರತಿಭಟನಾ ರ್‍ಯಾಲಿ ನಗರದ ಪ್ರಮುಖ ಮಾರ್ಗಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಮಾರ್ಗದುದ್ದಕ್ಕೂ ಧಿಕ್ಕಾರ, ಧಿಕ್ಕಾರ ಸರ್ಕಾರಕ್ಕೆ ಧಿಕ್ಕಾರ, 'ವಕ್ಫ್‌ ಹಟಾವೋ, ಕಿಸಾನ್‌ ಬಚಾವೋ' ಎಂದು ಘೋಷಣೆಗಳನ್ನು ಹಾಕಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲ ಸಮಯ ರಸ್ತೆ ತಡೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದ ಮಗ್ಗುಲಲ್ಲಿರುವ ಪಾದಚಾರಿ ಮಾರ್ಗ ಹಾಗೂ ರಸ್ತೆಯ ಒಂದು ಭಾಗದಲ್ಲಿ ಕುಳಿತು ಧರಣಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

Edited By : Manjunath H D
PublicNext

PublicNext

11/11/2024 09:56 pm

Cinque Terre

17.14 K

Cinque Terre

0