ಬೆಳಗಾವಿ: ಪ್ರಸಕ್ತ ಸಾಲಿನಲ್ಲಿ ಕಬ್ಬು ಬೆಳೆದ ರೈತರಿಗೆ ಪ್ರತೀ ಟನ್ ಕಬ್ಬಿಗೆ 5500 ರೂ. ನಿಗದಿ ಮಾಡುವಂತೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳಿಂದ ಬೆಳಗಾವಿ ನಗರದಲ್ಲಿ ಇಂದು (ಅ.10) ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು. ಮಳೆಯನ್ನೂ ಲೆಕ್ಕಿಸದೆ ರೈತರು ನಗರದ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದ ಅಶೋಕ ವೃತ್ತದಿಂದ ಡಿ.ಸಿ. ಕಚೇರಿ ವರೆಗೆ ರ‍್ಯಾಲಿ ನಡೆಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ತಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ರ‍್ಯಾಲಿ ಮೂಲಕ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ರೈತರು ರಸ್ತೆ ತಡೆ ನಡೆಸಿದರು. ರಸ್ತೆ ಮಧ್ಯೆಯೇ ಮಲಗಿ, ಹಸಿರು ಶಾಲು ಪ್ರದರ್ಶಿಸುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದರು.
ಕಳೆದೊಂದು ದಶಕದಿಂದ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಮೋಸವಾಗುತ್ತಿದೆ. ರೈತರಿಗೆ ಸೂಕ್ತ ದರ ನೀಡುತ್ತಿಲ್ಲ. ಹಾಗಾಗಿ ಪ್ರತಿ ಟನ್ ಕಬ್ಬಿಗೆ 5500 ದರ ನೀಡಬೇಕು. ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುವ ವರೆಗೂ ಹೋರಾಟ ಮಾಡುವ ಎಚ್ಚರಿಕೆಯನ್ನು ರೈತ ಮುಖಂಡರು ನೀಡಿದರು. ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಈ ಸಂದರ್ಭ ಪೊಲೀಸ್ ಹಾಗೂ ರೈತ ಮುಖಂಡರ ಮಧ್ಯೆ ಕೆಲಕಾಲ ವಾಗ್ವಾದ ಕೂಡ ನಡೆಯಿತು.
PublicNext
10/10/2022 08:44 pm