ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗುತ್ತೆಗಾರರ ಅಸೋಸಿಯೇಷನ್ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಹಾಗೂ ನೀರಾವರಿ ಇಲಾಖೆಗಳಲ್ಲಿ ಅತಿ ಹೆಚ್ಚು ಭ್ರಷ್ಟಚಾರವಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮೇ 25 ರಿಂದ ಒಂದು ತಿಂಗಳು ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆಂಪಣ್ಣ ಅವರು, ಟೆಂಡರ್ ಕರೆಯೋಕೆ ಶೇ.5 ರಷ್ಟು ಕಮಿಷನ್ ಕೊಡ್ಬೇಕು. ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಚಾರ ನಡೀತಾ ಇದೆ. ನೀರಾವರಿ ಇಲಾಖೆಯಲ್ಲಿಯೂ ಕಮಿಷನ್ ದಂಧೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಬಿಐ ತನಿಖೆಗೆ ಆಗ್ರಹ: ಅತ್ಮಹತ್ಯೆ ಪ್ರಕರಣವನ್ನ ಸಿಬಿಐ ಅಥವಾ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರರ ಕುಟುಂಬಕ್ಕೆ ₹2 ಕೋಟಿ ಪರಿಹಾರ ನೀಡಬೇಕು. ಕೂಡಲೇ ಗುತ್ತಿಗೆ ಹಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರನ ಸಾವಿಗೆ ಸರ್ಕಾರವೇ ನೇರ ಹೊಣೆ ಹೊರಬೇಕು. ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಪರಿಹಾರ ನೀಡುವಂತೆ ಕೆಂಪಣ್ಣ ಆಗ್ರಹಿಸಿದರು.
ಯಾರು ಕಾರಣ ಅಂತಾ ಡೆತ್ ನೋಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಸಚಿವರು ಶೇ.40 ರಷ್ಟು ಕಮಿಷನ್ ಕೇಳುತ್ತಿದ್ದಾರೆ ಅಂತಾ ಆರೋಪ ಮಾಡಿದ್ದಾರೆ. ದೆಹಲಿಗೆ ತೆರಳಿ ಅಮಿತ್ ಶಾ ಮತ್ತು ಮೋದಿಗೂ ದೂರು ಸಲ್ಲಿಸಿದ್ದರು. ದೆಹಲಿಯಲ್ಲಿ ದೂರು ಕೊಟ್ಟಾಗಲೇ ಸ್ಪಂದನೆ ಮಾಡಿದ್ದರೆ ಜೀವ ಉಳಿಯುತ್ತಿತ್ತು. ಸಚಿವರು ಮಾನವೀಯತೆಯಿಂದ ನಡೆದುಕೊಂಡಿದ್ದರೆ ಜೀವ ಬಲಿಯಾಗುತ್ತಿರಲಿಲ್ಲ ಎಂದು ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ವತಿಯಿಂದ ಸಂತಾಪ ಸೂಚಿಸಿ ಮಾತನಾಡಿದ ಅವರು, ಒಂದು ತಿಂಗಳು ಕೆಲಸ ಸ್ಥಗಿತಗೊಳಿಸುವಂತೆ ತೀರ್ಮಾನ ಮಾಡಲಾಗಿದೆ. ಮೇ 25 ರಿಂದ ಒಂದು ತಿಂಗಳು ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸುತ್ತೇವೆ. ಭ್ರಷ್ಟಾಚಾರ ಹೆಚ್ಚಿದ್ದರೂ ಸಿಎಂ ಮೌನವಾಗಿರೋದು ಸರಿಯಲ್ಲ. ಆರೋಗ್ಯ ಇಲಾಖೆಯಲ್ಲಿ ಹೆಚ್ಚು ಭ್ರಷ್ಟಚಾರ ನಡೀತಾ ಇದೆ.
Kshetra Samachara
13/04/2022 11:03 pm