ವರದಿ - ಗಣೇಶ್ ಹೆಗಡೆ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಒಟ್ಟು 1,342 ಮರಗಳನ್ನು ಬಿಎಂಆರ್ ಸಿಎಲ್ ಕತ್ತರಿಸಲಿದೆ.
ಈಗಾಗಲೇ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಆ ಪ್ರಕ್ರಿಯೆಗೆ ಬಿಎಂಆರ್ ಸಿಎಲ್ ಚಾಲನೆ ನೀಡಿದೆ.
ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ಹಾಗೂ ವೆಲ್ಲಾರ ಜಂಕ್ಷನ್ ಯಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ರಸ್ತೆಯಲ್ಲಿರುವ 1,342 ಮರ ಕತ್ತರಿಸಲು ನಮ್ಮ ಮೆಟ್ರೋ ಪ್ರಾಧಿಕಾರ ಮುಂದಾಗಿದೆ.
ವೆಲ್ಲಾರ್ ಜಂಕ್ಷನ್ ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ಮಾರ್ಗದಲ್ಲಿ 8 ಮರಗಳನ್ನು ಕತ್ತರಿಸಲು ಮತ್ತು 2 ಮರಗಳನ್ನು ಉಳಿಸಿಕೊಳ್ಳಲು ಅನುಮತಿ ನೀಡಿ ಆದೇಶಿಸಿತು.
ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರ ಮತ್ತು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 58 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಗೆ 4,400 ಮರಗಳು ಬಲಿಯಾಗಲಿವೆ ಅಥವಾ ಎತ್ತಂಗಡಿ ಆಗಲಿವೆ ಎಂದು ಮೆಟ್ರೋ ನಿಗಮ ಅಂದಾಜಿಸಿತ್ತು. ಅದರಂತೆ ಮೆಟ್ರೋ ಕಾಮಗಾರಿಯ ಫೇಸ್-2 ಬಿ (ಕೆ.ಆರ್.ಪುರದಿಂದ ದೇವನಹಳ್ಳಿ ವಿಮಾನ ನಿಲ್ದಾಣ)ನಲ್ಲಿ ಬರುವ ಹೊರ ವರ್ತುಲ ರಸ್ತೆಯ ಕಸ್ತೂರಿ ನಗರ ಮತ್ತು ಕೆಂಪಾಪುರ ನಡುವಿನ 10 ಕಿ.ಮೀ. ಅಂತರದಲ್ಲಿ 1,507 ಮರಗಳನ್ನು ಕತ್ತರಿಸಲು ಮೆಟ್ರೋ ನಿಗಮ ಸಿದ್ಧತೆ ನಡೆಸಿತ್ತು. ಆದರೆ ಈಗ 1,334 ಮರಗಳನ್ನು ಕತ್ತರಿಸುವ ಪ್ರಕ್ರಿಯೆ ಚಾಲನೆ ನೀಡಲಾಗಿದೆ.
ಕಸ್ತೂರಿ ನಗರ ಮತ್ತು ಕೆಂಪಾಪುರ ಮಾರ್ಗದ ಮಧ್ಯೆ ಹೊರಮಾವು, ಎಚ್ ಆರ್ ಬಿಆರ್ ಬಡಾವಣೆ, ಕಲ್ಯಾಣ ನಗರ, ಎಚ್ ಬಿಆರ್ ಬಡಾವಣೆ, ನಾಗವಾರ, ವೀರಣ್ಣಪಾಳ್ಯ ನಿಲ್ದಾಣಗಳು ಬರಲಿವೆ. 2024ರೊಳಗೆ ಕಾಮಗಾರಿ ಮುಗಿಸುವ ಇರಾದೆಯನ್ನು ಮೆಟ್ರೋ ನಿಗಮ ಹೊಂದಿದೆ. ಸದ್ಯ ಮೆಟ್ರೋ ಕಂಬಗಳನ್ನು ಹಾಕುವ ಕಾಮಗಾರಿ ನಡೆಯುತ್ತಿದೆ.
PublicNext
05/05/2022 08:23 pm