ಆನೇಕಲ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಹಿತ ಹಲವು ರಾಜಕೀಯ ಮುತ್ಸದ್ಧಿಗಳು, ನಾಯಕರು ವಿಶ್ರಾಂತಿ ಪಡೆದಿದ್ದರು ಈ ಪ್ರವಾಸಿ ಮಂದಿರದಲ್ಲಿ! ಆದರೆ, ಇಂತಹ ಐತಿಹಾಸಿಕ ಹಿರಿಮೆಯ ಕಟ್ಟಡದ ಈಗಿನ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
ಒಂದೆಡೆ ಅಲ್ಲಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು, ಮತ್ತೊಂದೆಡೆ ಸಿಕ್ಕ ಸಿಕ್ಕ ಕಡೆ ಬಿಸಾಡಿರುವ ಕಸ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಬನ್ನೇರುಘಟ್ಟ ಪ್ರವಾಸಿ ಮಂದಿರದಲ್ಲಿ. ಬೆಂಗಳೂರು ಹೊರವಲಯದಲ್ಲಿರುವ ಬನ್ನೇರುಘಟ್ಟ ಪ್ರವಾಸಿಗರ ಜತೆಗೆ ಸ್ಥಳೀಯರ ಅಚ್ಚುಮೆಚ್ಚಿನ ತಾಣವೂ ಹೌದು.
ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದಾಗಿ ಜನಮನ್ನಣೆ ಪಡೆದಿದ್ದರೆ, ಇನ್ನೊಂದೆಡೆ ಇಲ್ಲಿನ ಚಂಪಕಧಾಮ ಸ್ವಾಮಿ ದೇವಾಲಯಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೀಗ ಪ್ರವಾಸಿ ಮಂದಿರ ಭೂತ ಬಂಗಲೆಯಾಗಿ ಮಾರ್ಪಾಟಾಗಿದೆ!
ಬನ್ನೇರುಘಟ್ಟ ಪೊಲೀಸ್ ಠಾಣೆ ಎದುರಿಗೆ 1936ರಲ್ಲಿ ನಿರ್ಮಾಣವಾದ ಪ್ರವಾಸಿ ಮಂದಿರವೀಗ ಜೂಜುಕೋರರು, ಪುಂಡು ಪೋಕರಿಗಳ ಅವಾಸಸ್ಥಾನವಾಗಿದೆ. ರಾತ್ರಿಯಾದರೆ ಅನೈತಿಕ ಚಟುವಟಿಕೆ ಕೇಂದ್ರವಾಗಿಯೂ ಬದಲಾಗುತ್ತದೆ. ಅಧಿಕಾರಿಗಳು ಈ ಪ್ರವಾಸಿ ಮಂದಿರ ಸಂರಕ್ಷಿಸಿ, ಸುಸಜ್ಜಿತ ಪ್ರವಾಸಿ ಬಂಗ್ಲೆಯಾಗಿ ಪರಿವರ್ತಿಸಬಹುದಿತ್ತು. ಆದರೆ, ಅಂತಹ ಯಾವುದೇ ಕೆಲಸವನ್ನು ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹರೀಶ್ ಗೌತಮನಂದ,
ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್
Kshetra Samachara
01/02/2022 10:29 am