ಯಲಹಂಕ: ಎತ್ತ ನೋಡಿದರತ್ತ ಹಸಿರ ಸಿರಿ... ಅಲ್ಲೊಂದು ಕಲ್ಲಿನಬಂಡಿ, ಅಗೋ ಅಲ್ಲಿ ಸೈನಿಕ... ಪಕ್ಕದಲ್ಲಿ ವನೌಷಧೀಯ ಗಿಡಗಳ ಸಾಲು... ಸನಿಹವೇ ಕಸ ವಿಲೇವಾರಿ ಸಂಕೀರ್ಣ. ಏನಿದು? ಹಸಿರ ವನದಲ್ಲಿ ʼಕಸದ ಕಂಪುʼ ಅಂತೀರಾ! ಇಲ್ಲಿದೆ ನೋಡಿ... ವಿಶೇಷ ವರದಿ.
ಹೌದು. ತಾಲೂಕಿನ ಅರಕೆರೆ ಗ್ರಾಪಂ ರಾಜ್ಯದಲ್ಲೇ ಅತ್ಯುತ್ತಮ ಮಾದರಿ ಕೆಲಸಕ್ಕೆ ಮುಂದಾಗಿದೆ. ಕಸ ಅಂದರೆ ಮೂಗು ಮುರಿಯೋದು, ಗಬ್ಬುನಾತಕ್ಕೆ ದೂರ ಹೋಗೋದು ಮಾಮೂಲಿ. ಆದರೆ, ನೀವು ಅರಕೆರೆ ಗ್ರಾಪಂ 2 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಕಸ ವಿಲೇವಾರಿ ಘಟಕಕ್ಕೆ ಬಂದರೆ ಬೆಂಗಳೂರಿನ ಲಾಲ್ ಬಾಗ್ & ಕಬ್ಬನ್ ಪಾರ್ಕ್ ಜೊತೆಗೆ ಹಳ್ಳಿ ವಾತಾವರಣಕ್ಕೆ ಭೇಟಿ ಕೊಟ್ಟ ಅನುಭವ ಆಗ್ತದೆ!
ಪ್ರಧಾನಿ ನರೇಂದ್ರ ಮೋದಿಯವರ ʼಸ್ವಚ್ಛ ಭಾರತʼದಿಂದ ಪ್ರೇರಣೆಗೊಂಡ ಅರಕೆರೆ ಗ್ರಾಪಂ ಸದಸ್ಯರ ಸೇವಾ ಕೈಂಕರ್ಯ ಎಲ್ಲರ ಹುಬ್ಬೇರುವಂತೆ ಮಾಡಿದೆ. ಕಸ ವಿಲೇವಾರಿಗೆ ಸ್ವಚ್ಛ ಸಂಕೀರ್ಣ ನಿರ್ಮಿಸಿ 42 ಬಗೆ ಕಸದ ವಸ್ತು ಬೇರ್ಪಡಿಸಲಾಗುತ್ತದೆ. ಹಸಿ- ಒಣ ಕಸ ವಿಂಗಡಿಸಲಾಗ್ತಿದೆ. ಜೊತೆಗೆ ಪ್ಲಾಸ್ಟಿಕ್ ಕಸ, ಕಬ್ಬಿಣ, ಅಲ್ಯೂಮಿನಿಯಂ, ತೆಂಗಿನಚಿಪ್ಪು, ಕಾಟನ್ ರಟ್ಟು, ಪ್ಲಾಸ್ಟಿಕ್ ಚೀಲ, ವಾಟರ್ ಬಾಟಲ್, ನಾನಾ ಪ್ಲಾಸ್ಟಿಕ್ ವಸ್ತು ವಿಲೇವಾರಿ ಮಾಡಲಾಗ್ತಿದೆ. 24 ಗಂಟೆಯಲ್ಲಿ ಸಾವಯವ ಗೊಬ್ಬರ ತಯಾರಿಯೂ ನಡೆಯುತ್ತದೆ.
ಮಳೆನೀರು ಕೊಯ್ಲು ಸಹ ಇನ್ನೊಂದು ವಿಶೇಷತೆ. ಎರೆಹುಳ ಗೊಬ್ಬರ ತೊಟ್ಟಿಯಿಂದ ಗೊಬ್ಬರವೂ ರೆಡಿ. ಮಳೆನೀರು ಸಂಗ್ರಹಕ್ಕೆ 5000 ಲೀ.ನ ಟ್ಯಾಂಕ್ ಇದೆ. ಪಕ್ಕದಲ್ಲೇ 50 ಬಗೆಯ ವನೌಷಧ ಗಿಡ ನೆಡಲಾಗಿದೆ. ನೀರಿನ ಕುಂಟೆಯಲ್ಲಿ ಮೀನು ಸಾಕಣೆ, ಸುತ್ತಮುತ್ತ 5000 ಗಿಡ ನೆಡಲಾಗಿದೆ. ಕಸ ವಿಲೇವಾರಿಯೊಂದಿಗೆ ಪಾರ್ಕ್ ಮತ್ತು ಕಾರ್ಯ ಚಟುವಟಿಕೆ ವೀಕ್ಷಿಸಲು ಅಕ್ಕಪಕ್ಕದ ಗ್ರಾಮಸ್ಥರು ಬರ್ತಿದ್ದಾರೆ.
PublicNext
22/01/2022 01:54 pm