ವರದಿ- ಗಣೇಶ್ ಹೆಗಡೆ
ಬೆಂಗಳೂರು- ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣವನ್ನು ಶೇ.26 ರಿಂದ 31ಕ್ಕೆ ಇಳಿಕೆ ಮಾಡಿರುವ ‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ’ (ಬಿಡಬ್ಲ್ಯೂಎಸ್‌ಎಸ್‌ಬಿ) ಮತ್ತಷ್ಟು ಕಡಿತಗೊಳಿಸುವುದರೊಂದಿಗೆ ಪ್ರತಿ ಮನೆಗೆ ಪೂರೈಕೆ ಆಗುವ ನೀರಿನ ಪ್ರಮಾಣವನ್ನು ನೇರವಾಗಿ ಮಂಡಳಿಯ ಸರ್ವರ್‌ಗೆ ಲಭ್ಯವಾಗ ತಂತ್ರಜ್ಞಾನವಿರುವ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಚಿಂತನೆ ನಡೆಸಿದೆ.
ಬೆಂಗಳೂರು ಜಲಮಂಡಳಿಯು 10.5 ಲಕ್ಷ ಸಂಪರ್ಕ ಹೊಂದಿದ್ದು, ಮೆಕ್ಯಾನಿಕಲ್ ಮೀಟರ್‌ಗಳನ್ನು ಹೊಂದಿದೆ. ಈ ಮೀಟರ್‌ಗಳನ್ನು ಅಳವಡಿಕೆ ಮಾಡಿ ೮ ರಿಂದ ೧೨ ವರ್ಷವಾಗಿದೆ. ಈ ಮೀಟರ್‌ಗಳಿಂದ ಸಾಕಷ್ಟು ಸಮಸ್ಯೆ, ತೊಂದರೆಗಳನ್ನು ಗ್ರಾಹಕರು ಮತ್ತು ಮಂಡಳಿ ಎದುರಿಸುತ್ತಿದೆ. ಸಮಸ್ಯೆ ಪರಿಹಾರ ಮಾಡುವ ಉದ್ದೇಶದಿಂದ ಸ್ಮಾರ್ಟ್ ಮೀಟರ್ ಅಳವಡಿಕೆ ಕುರಿತು ಚರ್ಚೆ ನಡೆಸಿದೆ.
ಸೆನ್ಮಾರ್ ಆಧಾರಿತವಾಗಿರುವ ಈ ಸ್ಮಾರ್ಟ್ ಮೀಟರ್‌ಗಳು ನೀರಿನ ಪೂರೈಕೆ ಬಗ್ಗೆ ನೇರವಾಗಿ ಮಂಡಳಿಗೆ ಮಾಹಿತಿಯನ್ನು ತತಕ್ಷಣ ನೀಡಲಿವೆ. ಅಲ್ಲದೇ ಪೂರೈಕೆ ಆಗುವ ನೀರಿನ ಪ್ರಮಾಣವನ್ನು ಅತ್ಯಂತ ನಿಖರವಾದ ಅಂಕಿ ಅಂಶ ಇದರಿಂದ ಮಂಡಳಿಗೆ ಲಭ್ಯವಾಗಲಿದೆ. ನೀರಿನ ಕಳ್ಳತನ ತಪ್ಪಿಸಬಹುದಾಗಿದೆ. ಜತೆಗೆ, ಪ್ರತಿ ತಿಂಗಳು ಮಂಡಳಿ ಸಿಬ್ಬಂದಿ ಮನೆ ಮನೆ ಹೋಗಿ ಮೀಟರ್ ಪರಿಶೀಲಿಸಿ ಬಿಲ್ ನೀಡುವುದು ತಪ್ಪಲಿದ್ದು, ನೇರವಾಗಿ ಆನ್‌ಲೈನ್‌ನಲ್ಲಿ ಗ್ರಾಹಕರಿಗೆ ಮೊಬೈಲ್‌ಗೆ ಬಿಲ್ ನೀಡಬಹುದಾದ ಅವಕಾಶ ಇರಲಿದೆ.
ನಗರದ ಒಂದು ಕಡೆ ಪ್ರಾಯೋಗಿಕವಾಗಿ ಸುಮಾರು 2ಸಾವಿರದಿಂದ 3 ಸಾವಿರ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿ ಪರಿಶೀಲನೆ ನಡೆಸುವುದಕ್ಕೆ ಮಂಡಳಿ ಚಿಂತನೆ ನಡೆಸಿದೆ. ಸುಮಾರು ಮೂರರಿಂದ ಆರು ತಿಂಗಳು ಅಧ್ಯಯನ ನಡೆಸಲಾಗುತ್ತಿದೆ. ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿ ಪ್ರಾಯೋಗಿಕವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗಿದೆ. ಆದೇ ಸಂಸ್ಥೆಯು ನಗರದಲ್ಲಿ ಪ್ರಾಯೋಗಿಕವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಮಂಡಳಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುಮಾರು 10.5 ಲಕ್ಷ ಗ್ರಾಹಕರಿದ್ದು, ಏಕಕಾಲಕ್ಕೆ ಸ್ಮಾರ್ಟ್ ಮೀಟರ್ ಅಳವಡಿಕೆ ಸಾಧ್ಯವಿಲ್ಲ. ಜತೆಗೆ, ಮೀಟರ್ ವಿವಿಧ ಗಾತ್ರದಲ್ಲಿ ಬೇಕಾಗಲಿದೆ. ಅದು ಮಾರುಕಟ್ಟೆಯಲ್ಲಿ ಲಭ್ಯವಿದೆಯೇ ಎಂಬುದರ ಬಗ್ಗೆ ತಿಳಿಯಬೇಕಿದೆ. ಒಂದು ಬಾರಿ ಅಳವಡಿಕೆ ಮಾಡಿದರೆ ಸುಮಾರು 10 ರಿಂದ 12 ವರ್ಷ ಬಾಳಿಕೆ ಬರಲಿದ್ದು, ಪ್ರಸ್ತುತ ಕಾಲಘಟ್ಟಕ್ಕೆ ಈ ರೀತಿ ಸ್ಮಾರ್ಟ್ ಮೀಟರ್ ಅಗತ್ಯವಿದೆ. ಇನ್ನು ಸ್ಮಾರ್ಟ್ ಮೀಟರ್‌ಗೆ ಸುಮಾರು 7 ರಿಂದ 8 ಸಾವಿರ ರು ಆಗಲಿದೆ. ಗ್ರಾಹಕರೇ ಮೀಟರ್ ಖರೀದಿಯ ಮೊತ್ತ ಪಾವತಿಸಬೇಕು. ಆದರೆ, ಪ್ರತಿ ತಿಂಗಳಿನ ಬಿಲ್ ಮೊತ್ತದೊಂದಿಗೆ ಸಣ್ಣ ಪ್ರಮಾಣದಲ್ಲಿ ದರ ನಿಗದಿ ಪಡಿಸಿ ಸಂಗ್ರಹಿಸುವುದಕ್ಕೆ ಮಂಡಳಿ ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
22/06/2022 06:53 pm