ದೊಡ್ಡಬಳ್ಳಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ತಾತ್ಕಲಿಕ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಸಂಪರ್ಕ ಕಡಿತದಿಂದ ಕಂಗಲಾಗಿರುವ 2 ಸಾವಿರಕ್ಕೂ ಹೆಚ್ಚು ಜನರು ಶಾಶ್ವತ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಅತಿ ಹಿಂದುಳಿದ ಹೋಬಳಿ ಸಾಸಲು ಹೋಬಳಿ. ಇದೇ ಹೋಬಳಿಯ ದೊಡ್ಡಬಳ್ಳಾಪುರ ಮತ್ತು ಕೊಟ್ಟಿಗೆಮಾಚೇನಹಳ್ಳಿಗೆ ಸಂಪರ್ಕಿಸುವ ಸೇತುವೆ ನಿನ್ನೆ ಸುರಿದ ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಈ ಸೇತುವೆ ಕೊಟ್ಟಿಗೆ ಮಾಚೇನಹಳ್ಳಿ, ಕುಕ್ಕಲಹಳ್ಳಿ ಮತ್ತು ಬ್ಯಾಡರಹಳ್ಳಿಯ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಸಂಪರ್ಕ ಸೇತುವೆಯಾಗಿತ್ತು. 2018 ರಿಂದ ಮಳೆ ಬಂದಾಗ ಕೊಟ್ಟಿಗೆಮಾಚೇನಹಳ್ಳಿ ಸೇತುವೆ ಮಳೆನೀರಿನೊಂದಿಗೆ ಕೊಚ್ಚಿ ಹೋಗೋದು ಮಾಮೂಲಿಯಾಗಿ ಬಿಟ್ಟಿದೆ. ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಮಳೆ ಬಂದಾಗ ಹೊರ ಜಗತ್ತಿನ ಸಂಪರ್ಕವನ್ನೆ ಕಳೆದು ಕೊಳ್ಳುತ್ತಾರೆ. ಸಂಪರ್ಕ ಕಡಿತದಿಂದ ಶಾಲಾ ಕಾಲೇಜ್ ಗಳಿಗೆ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗಬೇಕಾದ ರೋಗಿಗಳು, ಅಗತ್ಯ ವಸ್ತುಗಳನ್ನ ತರಲು ನಗರಕ್ಕೆ ಹೋಗಬೇಕಾದ ಜನರು ಸಾಕಷ್ಟು ಸಮಸ್ಯೆಗಳನ್ನ ಅನುಭವಿಸುತ್ತಿದ್ದಾರೆ.
ಪ್ರತಿ ಸಲ ಸೇತುವೆ ಕೊಚ್ಚಿ ಹೋದಾಗಲು 5 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿ ಸರ್ಕಾರ ಕೈತೊಳೆದು ಕೊಳ್ಳುತ್ತಿದೆ. ಆದರೆ ಪ್ರತಿ ಬಾರಿ ಮಳೆ ಬಂದಾಗಲೂ ಸಂಪರ್ಕ ಕಳೆದುಕೊಳ್ಳುವ ಇಲ್ಲಿನ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
70 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ಹಣ ಬಿಡುಗಡೆಯಾಗಿದೆ, ಈಗಾಗಲೇ ಸರ್ವೆ ಕಾರ್ಯ ಸಹ ಮಾಡಲಾಗಿದೆ. ಆದರೆ ಈ ಹಣದಲ್ಲಿ ಸೇತುವೆ ನಿರ್ಮಾಣ ಅಸಾಧ್ಯ ಅನ್ನುವುದು ಸ್ಥಳೀಯರ ವಾದ. ಒಂದು ಕೋಟಿ ವೆಚ್ಚದಲ್ಲಿ ಭದ್ರವಾದ ಸೇತುವೆ ನಿರ್ಮಿಸಬಹುದು. ಒಮ್ಮೆ ಶಾಶ್ವತ ಸೇತುವೆ ನಿರ್ಮಾಣವಾದರೆ 2 ಸಾವಿರಕ್ಕೂ ಹೆಚ್ಚು ಜನರ ನೆಮ್ಮದಿಗೆ ಕಾರಣವಾಗಲಿದೆ.
Kshetra Samachara
20/05/2022 05:33 pm