ದೊಡ್ಡಬಳ್ಳಾಪುರ: ದಾಬಸ್ ಪೇಟೆ-ಹೊಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರೈತರ ಹೊಲಗಳಿಗೆ ನುಗ್ಗಿದೆ. ಹೊಲದಲ್ಲಿ ನಿಂತಿರುವ ನೀರು ರೈತನ ವರ್ಷದ ಕೂಳನ್ನೇ ಕಸಿದಿದೆ.
ರಾಷ್ಟ್ರೀಯ ಹೆದ್ದಾರಿ 207ರ ಕಾಮಗಾರಿ ಪ್ರಾರಂಭವಾಗಿ ದಶಕವಾಯ್ತು, ಸ್ಥಗಿತಗೊಂಡಿದ್ದ ಕಾಮಾಗಾರಿ ಇತ್ತೀಚೆಗೆ ವೇಗ ಪಡೆದುಕೊಂಡು 2023ರ ಮೇನಲ್ಲಿ ಸಂಚಾರಕ್ಕೆ ಸಿದ್ದವಾಗಲಿದೆ. ತ್ವರಿತವಾಗಿ ಕಾಮಾಗಾರಿ ಮಾಡುತ್ತಿರುವ ಕಾರಣದಿಂದ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಅದಕ್ಕೆ ಸಾಕ್ಷಿ ಅನ್ನುವಂತೆ ನಿನ್ನೆ ರಾತ್ರಿ ಸುರಿದ ಮಳೆಯಿಂದ ರಾಜಕಾಲುವೆಗಳಲ್ಲಿ ನೀರು ಸರಗವಾಗಿ ಹರಿದು ಹೋಗದೆ ರೈತರ ಹೊಲಗಳಿಗೆ ನುಗ್ಗಿದೆ. ತಾಲೂಕಿನ ಕೆಸ್ತೂರು ಕೆರೆ ಕೋಡಿ ಬಿದ್ದ ನೀರು ಅರಳುಮಲ್ಲಿಗೆ ಕೆರೆಗೆ ಸೇರಬೇಕು ಆದರೆ ಕಾಲುವೆಗೆ ಅಡ್ಡವಾಗಿ ಹೆದ್ದಾರಿ ಕಾಮಾಗಾರಿ ನಡೆಯುತ್ತಿದೆ. ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ನೂರಾರು ಎಕರೆಯ ಜೋಳ ಮತ್ತು ರಾಗಿ ಹೊಲಗಳಿಗೆ ನುಗ್ಗಿದೆ.
ಕೆಸ್ತೂರು ಕೆರೆ ಮಾತ್ರ ಸದ್ಯ ಕೊಡಿ ಬಿದ್ದಿದೆ, ಮಳೆ ಇದೆ ರೀತಿ ಮುಂದುವರೆದ್ರೆ, ಹಣಬೆ, ತಿಪ್ಪೂರು, ಶಿರವಾರ, ಸೇರಿದಂತೆ 10ಕ್ಕೂ ಹೆಚ್ಚು ಕರೆಗಳು ಕೋಡಿ ಬೀಳಲಿವೆ. ಈ ಕೆರೆಗಳ ನೀರು ಸಹ ಇದೇ ಕಾಲುವೆ ಮೂಲಕ ಹರಿದು ಬರುವುದರಿಂದ ಹೆದ್ದಾರಿಯ ಸುತ್ತಮುತ್ತಲಿನ ಹೊಲಗಳ ಸ್ಥಿತಿ ಮತ್ತಷ್ಟು ಹದಗೆಡುತ್ತೆ, ಮಳೆಗಾಲದಲ್ಲಿ ಕಾಲುವೆಗಳ ಕಾಮಾಗಾರಿ ನಡೆಸಿರುವುದು ಇಷ್ಟೇಲ್ಲ ಅವಾಂತರಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತನಾಡುವ ಭರವಸೆ ನೀಡಿದ್ದಾರೆ. ಮತ್ತು ರಾಜಕಾಲುವೆಗಳು ಒತ್ತುವರಿ ತೆರವು ಕಾರ್ಯಚರಣೆಯನ್ನ ತ್ವರಿತವಾಗಿ ಮಾಡುವುದಾಗಿ ಹೇಳಿದರು.
ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು ಸಹ ರೈತರ ಹೊಲಗಳಿಗೆ ಮಳೆನೀರು ನುಗ್ಗಲು ಕಾರಣವಾಗಿದೆ. ಒತ್ತುವರಿದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಾಗ ಮಾತ್ರ ಸಮಸ್ಯೆಗಳು ಬಗೆಹರಿಯೋದು.
PublicNext
06/09/2022 11:45 am