ಬೆಂಗಳೂರು: ಸಿಲಿಕಾನ್ ಸಿಟಿಯ ಗುಂಡಿ ಬಿದ್ದು ಹಾಳಾದ ರಸ್ತೆಗಳ ಕುರಿತಾಗಿ ಹೈಕೋರ್ಟ್ ಮತ್ತೊಮ್ಮೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ (ಎಆರ್‌ಟಿಎಸ್) ಸಂಸ್ಥೆಯೊಂದಿಗೆ ಈವರೆಗೂ ಒಪ್ಪಂದ ಮಾಡಿಕೊಳ್ಳದ ಹಾಗೂ ಕಾರ್ಯಾದೇಶ ಹೊರಡಿಸದ ಬಿಬಿಎಂಪಿಯ ಕ್ರಮವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಈಗಾಗಲೇ ಹಲವು ಬಾರಿ ತರಾಟೆಗೆ ತೆಗೆದುಕೊಂಡರೂ ಬುದ್ದಿಕಲಿಯದ ಪಾಲಿಕೆ ತನ್ನ ಹಳೆಯ ಚಾಳಿ ಮುಂದುವರಿಸಿ ಮತ್ತೆ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದೆ. ಅಷ್ಟೇ ಅಲ್ಲದೆ, ಸಾಕಷ್ಟು ಸಮಯ ನೀಡಲಾಗಿದ್ದರೂ, ಯಾವುದೇ ಕೆಲಸವಾಗಿಲ್ಲ. ಎಲ್ಲದಕ್ಕೂ ಮಿತಿ ಇರುತ್ತದೆ, ಇನ್ನು ಸಹಿಸಲು ಸಾಧ್ಯವಿಲ್ಲ. ರಸ್ತೆ ನಿರ್ವಹಣೆಯ ಕೆಲಸವನ್ನು ಮಿಲಿಟರಿ ಏಜೆನ್ಸಿ ಅಥವಾ ಬೇರೆ ಯಾವುದಾದರೂ ಸಂಸ್ಥೆಗೆ ವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಮಂಗಲದ ವಿಜಯ್ ಮೆನನ್ ಮತ್ತಿತರರು ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತು ಸಲ್ಲಿಸಿರುವ ಅರ್ಜಿಯ ಕುರಿತು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಆಗ ನ್ಯಾಯಪೀಠ, ಕಳೆದ ವಿಚಾರಣೆ ವೇಳೆ ಎರಡು ದಿನಗಳಲ್ಲಿ ಎಆರ್‌ಟಿಎಸ್ ಸಂಸ್ಥೆಯೊಂದಿಗೆ ಒಪ್ಪಂದ ಆಖೈರು ಮಾಡಿಕೊಳ್ಳಲು ಸೂಚಿಸಲಾಗಿತ್ತು, ಏನಾಗಿದ ಎಂದು ಪ್ರಶ್ನಿಸಿತು. ಪಾಲಿಕೆ ಪರ ವಕೀಲರು, ಇಲ್ಲ ಇನ್ನೂ ಒಪ್ಪಂದ ಏರ್ಪಟ್ಟಿಲ್ಲ. ಅದಕ್ಕೆ ಸ್ವಲ್ಪ ಸಮಯಾವಕಾಶ ನೀಡಬೇಕೆಂದರು. ಅದಕ್ಕೆ ಸಿಟ್ಟಿಗೆದ್ದ ಸಿಜೆ, ಮತ್ತೆ ಬಿಬಿಎಂಪಿ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿ ಹರಿಹಾಯ್ದಿದ್ದಾರೆ.
PublicNext
29/06/2022 02:27 pm