ವರದಿ: ಗಣೇಶ ಹೆಗಡೆ
ಬೆಂಗಳೂರು: ನಗರದ 139 ಗ್ರಾಮಗಳಲ್ಲಿ 326 ಎಕರೆಯಷ್ಟು ರಾಜಕಾಲುವೆ ಒತ್ತುವರಿ ಮಾಡಿ ಕೊಂಡಿರುವುದು ಪತ್ತೆಯಾಗಿದೆ! 356 ವಾಸದ ಮನೆಗಳು, 35 ವಾಣಿಜ್ಯ ಸಂಕೀರ್ಣಗಳು ಸಹಿತ ಒಟ್ಟು 1,570 ಒತ್ತುವರಿ ಗುರುತಿಸಲಾಗಿದ್ದು, ಶೀಘ್ರ ಎಲ್ಲ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿ ನಿರ್ಧ ರಿಸಿರುವುದರಿಂದ ಒತ್ತುವರಿದಾರರ ಎದೆಯಲ್ಲಿ ಢವ ಢವ ಶುರುವಾಗಿದೆ.
ಭಾರಿ ಮಳೆಯಿಂದಾಗಿ ನಗರದಲ್ಲಿ ಸಂಭವಿಸಿದ್ದ ಸಾಕಷ್ಟು ಅನಾಹುತಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣ ಎಂಬುದು ಪತ್ತೆಯಾಗಿರುವುದರಿಂದ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಆದೇಶ ನೀಡಿದ್ದರು.
ಇದೀಗ ಒತ್ತುವರಿ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ. ಪೂರ್ವ ವಲಯದ 10 ಗ್ರಾಮಗಳಲ್ಲಿ 38 ಎಕರೆ ಒತ್ತುವರಿಯಾಗಿದ್ದು, 89 ವಾಸದ ಮನೆಗಳು, ಒಂದು ವಾಣಿಜ್ಯ ಕಟ್ಟಡ, 10 ಕೃಷಿ ಜಾಗ, 5 ರಸ್ತೆ ಒತ್ತುವರಿ ಯಾಗಿವೆ.
ಪಶ್ಚಿಮ ವಲಯದ ಏಳು ಗ್ರಾಮಗಳಲ್ಲಿ 22 ಎಕರೆ ಒತ್ತುವರಿಯಾಗಿದ್ದು, 36 ವಾಸದ ಮನೆಗಳು ಹಾಗೂ 16 ರಸ್ತೆ. ದಕ್ಷಿಣ ವಲಯದ ಎರಡು ಗ್ರಾಮಗಳಲ್ಲಿ 1.20 ಎಕರೆ ಒತ್ತುವರಿ, ನಾಲ್ಕು ವಾಸದ ಮನೆಗಳು, ಎರಡು ರಸ್ತೆಗಳಿವೆ. ಕೋರಮಂಗಲ ಕಣಿವೆಯ ಮೂರು ಗ್ರಾಮಗಳಲ್ಲಿ 5.20 ಎಕರೆ ಒತ್ತುವರಿ, 9 ವಾಣಿಜ್ಯ ಕಟ್ಟಡ, ಒಂದು ಕೃಷಿ ಪ್ರದೇಶ ಗುರುತಿಸಲಾಗಿದೆ.
ಯಲಹಂಕದ 30 ಗ್ರಾಮಗಳಲ್ಲಿ 46 ಎಕರೆ ಒತ್ತುವರಿ, 36 ವಾಸದ ಮನೆಗಳು, 248 ಕೃಷಿ ಪ್ರದೇಶ, 39 ರಸ್ತೆ. ಮಹದೇವಪುರದ 53 ಗ್ರಾಮಗಳಲ್ಲಿ 170 ಎಕರೆಗೂ ಹೆಚ್ಚು ಒತ್ತುವರಿಯಾಗಿದ್ದು, 50 ವಾಸದ ಮನೆಗಳು, ಎರಡು ವಾಣಿಜ್ಯ ಸಂಕೀರ್ಣಗಳು, 573 ಕೃಷಿ ಜಾಗ, 136 ರಸ್ತೆಗಳಿವೆ.
ಬೊಮ್ಮನಹಳ್ಳಿಯ 20 ಗ್ರಾಮಗಳಲ್ಲಿ 18.23 ಎಕರೆ ಒತ್ತುವರಿಯಲ್ಲಿ 87 ವಾಸದ ಮನೆಗಳು, 11 ವಾಣಿಜ್ಯ ಸಂಕೀರ್ಣ, ಏಳು ಕೃಷಿ ಪ್ರದೇಶ , 23 ರಸ್ತೆ ನಿರ್ಮಿಸಲಾಗಿದೆ. ಆರ್ ಆರ್ ನಗರದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ 15 ವಾಸದ ಮನೆ, ಒಂದು ವಾಣಿಜ್ಯ ಸಂಕೀರ್ಣ, 4 ಕೃಷಿ ಪ್ರದೇಶ ನಿರ್ಮಿಸಲಾಗಿದೆ. ದಾಸರಹಳ್ಳಿಯ 13 ಗ್ರಾಮಗಳಲ್ಲಿ 23 ಎಕರೆ ಒತ್ತುವರಿ, 39 ವಾಸದ ಮನೆ, 11 ವಾಣಿಜ್ಯ ಸಂಕೀರ್ಣ, 92 ಕೃಷಿ ಪ್ರದೇಶ, 23 ರಸ್ತೆ ನಿರ್ಮಿಸಲಾಗಿದೆ.
Kshetra Samachara
26/11/2021 10:09 am