ಬೆಂಗಳೂರು: ಆರ್.ಎಸ್.ಎಸ್ ನ ವಿಚಾರ, ಆದರ್ಶ, ದೇಶಭಕ್ತಿಗೆ ನಾನು ತಲೆಭಾಗಿದ್ದೇನೆ. ಅದರ ತತ್ವ ಆದರ್ಶಗಳ ಹಿನ್ನೆಲೆಯಲ್ಲಿ ದೇಶ ಕಟ್ಟಲು ಪಣವನ್ನು ತೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದುದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅಮೃತ ಭಾರತಿಗೆ ಕರುನಾಡ ದ ಆರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಗ್ರ ಕನ್ನಡ ನಾಡಿನ ಜನತೆಗೆ 76 ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಆರ್.ಎಸ್‌ಎಸ್ ಬಗ್ಗೆ ನನಗೆ ಅಭಿಮಾನವಿದೆ. ದೇಶದ ಅಭಿವೃದ್ಧಿಯ ಎಲ್ಲ ವಿಚಾರಗಳನ್ನಿಟ್ಟುಕೊಂಡು ನಾವೆಲ್ಲರೂ ಮುಂದೆ ಹೋಗೋಣ ಎಂದರು.
ಅಮೃತಕಾಲ ನಮ್ಮದು. ಭವಿಷ್ಯ ಮತ್ತು ದೇಶ ನಮ್ಮದು. ಈ ದೇಶವನ್ನು ವಿಶ್ವದಲ್ಲಿಯೇ ಅಗ್ರಮಾನ್ಯ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಕರೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊಟ್ಟಿದ್ದಾರೆ. ಅವರ ವಿಚಾರಕ್ಕೆ ಸಂಪೂರ್ಣವಾಗಿ ಬೆಂಬಲವನ್ನು ಕೊಡೋಣ. ಅದಕ್ಕಾಗಿ ಶಕ್ತಿಯನ್ನು ತುಂಬುತ್ತ ನಾವು ಮುಂದೆ ನಡೆಯೋಣ. ಯಶಸ್ಸು, ಸಾಧನೆ ನಮ್ಮದಾಗುತ್ತದೆ. ದೇಶದ ಭವಿಷ್ಯ ನಿರ್ಮಿಸೋಣ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಒಂದು ದೇಶ 75 ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಮಯದಲ್ಲಿರುವ ನಾವೆಲ್ಲರೂ ಸುದೈವಿಗಳು. ಒಬ್ಬ ವ್ಯಕ್ತಿಗೆ 75 ದೊಡ್ಡದು, ಒಂದು ದೇಶಕ್ಕೆ ದೊಡ್ಡದಲ್ಲ. ಅನುಭವ, ಯುವಶಕ್ತಿಯಿರುವ ನಾಯಕ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ದೇಶ ಮುಂದುವರೆಯುತ್ತಿದೆ ಎಂದರು.
ಸ್ವತಂತ್ರ ಹೋರಾಟದ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಯಾರಿಂದಲೂ ಸ್ವತಂತ್ರ ಹೋರಾಟದ ಇತಿಹಾಸವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಸ್ವತಂತ್ರ ಹೋರಾಟದ ಇತಿಹಾಸ ಬರೆಯುವವರು ಬದಲಾವಣೆಯ ಪ್ರಯತ್ನವನ್ನು 75 ವರ್ಷದಿಂದ ಮಾಡಿದ್ದಾರೆ. ಸತ್ಯವನ್ನು ಪ್ರಕಟಿಸುವ, ಸತ್ಯವನ್ನು ಇವತ್ತಿನ ಜನಾಂಗ ಅರಿಯುವ ಕಾಲ ಬಂದಿದೆ. ಸ್ವಾತಂತ್ರ್ಯ ಸಾವಿರಾರು ಜನರ ತ್ಯಾಗ ಬಲಿದಾನದಿಂದ ಬಂದಿದೆ. ಯೋಧರು, ರೈತರು, ಕೂಲಿಕಾರರು, ಹಲವಾರು ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು ಹೆಸರುಗಳು ಎಲ್ಲಿಯೂ ಬರುವುದಿಲ್ಲ. ಕರ್ನಾಟಕದಲ್ಲಿಯೇ ಸಾವಿರಾರು ಜನ ಮನೆ ಮಠ ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ 25 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಹೆಸರು ಪ್ರಕಟವಾಗಿಲ್ಲ. 1947 ಕ್ಕಿಂತ ಮೊದಲು 150 ವರ್ಷದ ಹಿಂದೆ ಸ್ವತಂತ್ರ ಹೋರಾಟ ಆರಂಭವಾಗಿದೆ. ಬ್ರಿಟಿಷರ ವಿರುದ್ಧ ದಂಗೆ ಎದ್ದವರು ರೈತರು. ಗುಜರಾತ್ ನ ಬಾರ್ಡೋಲಿ ಸತ್ಯಾಗ್ರಹ, ಪಶ್ಚಿಮ ಬಂಗಾಳದ ಇಂಡಿಗೋ ಸತ್ಯಾಗ್ರಹ, ದಕ್ಷಿಣದ ಭಾರತದ ಡೆಖ್ಖನ್ ಸತ್ಯಾಗ್ರಹದಿಂದ ಬ್ರಿಟಿಷರಿಗೆ ನಡುಕ ಹುಟ್ಟಿತ್ತು ಎಂದರು.
ಜಲಿಯನ್ ವಾಲಾಬಾಗ್ ನಲ್ಲಿ 4 ಸಾವಿರ ಜನರ ಸಾವನ್ನಪ್ಪಿದರು. ನಾರಾಯಣ ಡೋಣಿ ಹೆಸರು ನೀವು ಕೇಳಿಲ್ಲ. ಹುಬ್ಬಳ್ಳಿಯ 12 ವರ್ಷದ ಬಾಲಕ ವಂದೇ ಮಾತರಂ ಹೇಳಿರುವುದಕ್ಕೆ ಬ್ರಿಟಿಷರ ಗುಂಡಿಗೆ ಬಲಿಯಾದ. ಅಂಕೋಲಾದ ಉಪ್ಪಿನ ಸತ್ಯಾಗ್ರಹ, ಈಸೂರಿನ ಸತ್ಯಾಗ್ರಹದಲ್ಲಿ ಗೋಲಿಬಾರ ಮತ್ತು ಮರಣದಂಡನೆ ಆಯಿತು. ಅವರ ಹೆಸರು ಎಲ್ಲಿಯೂ ಬಂದಿಲ್ಲ. ಇತಿಹಾಸಕಾರರು ಅವರ ಹೆಸರುಗಳನ್ನು ಬರೆದಿಲ್ಲ. ಅಂತಹ ಅನಾಮಧೇಯ ತ್ಯಾಗ, ಪ್ರಾಣ ಕೊಟ್ಟ ನಮ್ಮ ಹೋರಾಟಗಾರರಿಗೆ ನಾವು ಈ 75 ನೇ ವರ್ಷದ ಮಹೋತ್ಸವವನ್ನು ಸಮರ್ಪಣೆ ಮಾಡಬೇಕಾಗಿದೆ ಎಂದರು.
Kshetra Samachara
15/08/2022 08:45 pm