ನಾಯಿ ಕಡಿತಕ್ಕೆ ಬಿಬಿಎಂಪಿ ಪರಿಹಾರ ನೀಡುವ ವಿಷಯವೇ ಅನೇಕ ಮಂದಿಗೆ ಗೊತ್ತಿಲ್ಲ. ಹೀಗಾಗಿ, ಕಳೆದ 7 ವರ್ಷದಲ್ಲಿ 32 ಸಾವಿರಕ್ಕೂ ಅಧಿಕ ಮಂದಿ ನಾಯಿ ಕಡಿತಕ್ಕೆ ಒಳಗಾದರೂ 25 ಮಂದಿ ಮಾತ್ರ ಪರಿಹಾರ ಪಡೆದಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಕಳೆದ 8 ವರ್ಷದಿಂದ ಬೀದಿನಾಯಿ ಕಡಿತಕ್ಕೆ ಬಿಬಿಎಂಪಿ ಪರಿಹಾರ ನೀಡುತ್ತಿದೆ. ಬೀದಿನಾಯಿ ಕಡಿತಕ್ಕೆ ಪರಿಹಾರ ವಿತರಣೆಗೆ ಪಾಲಿಕೆ ಕಾನೂನು ಕೋಶದ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಮಾನದಂಡ ರೂಪಿಸಿ ಪರಿಹಾರ ಮೊತ್ತ ನಿಗದಿ ಪಡಿಸಲಾಗಿದೆ.
ನಾಯಿ ಕಡಿತದಿಂದ ತರಚಿದ ಗಾಯವಾದರೆ ಪ್ರತಿ ಗಾಯಕ್ಕೆ 2 ಸಾವಿರ ರೂ., ಆಳವಾದ ಗಾಯಕ್ಕೆ 3 ಸಾವಿರ ರೂ., ಗಾಯಗಳ ಸಂಖ್ಯೆ ಹೆಚ್ಚಾಗಿದ್ದರೆ 10 ಸಾವಿರ ರೂ. ಹಾಗೂ ಬಿಬಿಎಂಪಿಯೇ ಚಿಕಿತ್ಸಾ ವೆಚ್ಚ ಭರಿಸುವುದು. ಒಂದು ವೇಳೆ ನಾಯಿ ಕಚ್ಚಿ ಮಕ್ಕಳು ಅಸು ನೀಗಿದರೆ 50 ಸಾವಿರ ರೂ., ವ್ಯಕ್ತಿ ಸಾವನ್ನಪ್ಪಿದರೆ 1 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಮಾರ್ಗಸೂಚಿ ರಚಿಸಲಾಗಿದೆ.
ಮಾನದಂಡ, ಪರಿಹಾರ ಮೊತ್ತ ನಿಗದಿ ಬಳಿಕ 2016ರಿಂದ 2023ರ ಏಪ್ರಿಲ್ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿ ದಾಳಿಗೆ ಒಟ್ಟು 32,161 ಮಂದಿ ತುತ್ತಾಗಿದ್ದಾರೆ. ಅವರಲ್ಲಿ ಕೇವಲ 25 ಮಂದಿಗೆ ಪಾಲಿಕೆಯಿಂದ ಪರಿಹಾರ ದೊರೆತಿದೆ.
ಬಿಬಿಎಂಪಿ ನಾಯಿ ಕಡಿತಕ್ಕೆ ಮಾನದಂಡ ರೂಪಿಸಿದ ಬಳಿಕ 2016- 17ರಲ್ಲಿ ಒಬ್ಬ ವ್ಯಕ್ತಿಗೆ ನಾಯಿ ಕಡಿತಕ್ಕೆ ಪರಿಹಾರ ಮೊತ್ತ ಹಾಗೂ ಚಿಕಿತ್ಸಾ ವೆಚ್ಚ ಸೇರಿ ಒಟ್ಟು 70, 420 ರೂ. ಪರಿಹಾರ ನೀಡಿದೆ.
2017-18ರಲ್ಲಿ3 ಮಂದಿಗೆ 60,645ರೂ., 2018-19ರಲ್ಲಿ ವಿಭೂತಿಪುರದಲ್ಲಿ ಪ್ರವೀಣ್ ಬಾಲಕ ಬೀದಿನಾಯಿಗಳ ದಾಳಿಯಿಂದ ಸಾವನ್ನಪ್ಪಿದ್ದ. ಆ ಕುಟುಂಬಕ್ಕೆ ಪರಿಹಾರ ಮೊತ್ತ ಹಾಗೂ ಆಸ್ಪತ್ರೆ ವೆಚ್ಚ ಸೇರಿ 8,42,963 ರೂ., 2019-20ರಲ್ಲಿ ಒಟ್ಟು 9 ಮಂದಿಗೆ 2, 07, 292, 2020-21ರಲ್ಲಿ 7 ಮಂದಿಗೆ 2, 22, 540, 2021-22ನೇ ಸಾಲಿನಲ್ಲಿ ನಾಲ್ವರಿಗೆ 85, 431 ರೂ. ಹಾಗೂ ಪ್ರಸಕ್ತ 2022-23ನೇ ಸಾಲಿನಲ್ಲಿ ಒಬ್ಬರಿಗೆ 26,100 ರೂ. ಸಹಿತ ಈವರೆಗೆ ಬಿಬಿಎಂಪಿ 15.15 ಲಕ್ಷ ಪರಿಹಾರ ಹಾಗೂ ಚಿಕಿತ್ಸಾ ವೆಚ್ಚವನ್ನು ಪಾಲಿಕೆ ಭರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿ: ಗಣೇಶ್ ಹೆಗಡೆ
PublicNext
07/06/2022 07:50 pm