ನೆಲಮಂಗಲ: ಆಕೆ ಕನ್ನಡದ ಖ್ಯಾತ ನಿರೂಪಕಿ. ಕೆಲವೊಂದು ಕನ್ನಡ ಸಿನೆಮಾಗಳಲ್ಲೂ ನಟಿಸಿದ್ದಾಳೆ. ಮಾಧ್ಯಮ ಜಗತ್ತಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಈ ನಿರೂಪಕಿಯ ತಂದೆ ಇದೀಗ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊನೆಯ ಬಾರಿಗೆ ತನ್ನ ಮಕ್ಕಳ ಮುಖ ನೋಡ್ಬೇಕು ಅಂತ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ..
ಸಾಕೋದಿದ್ರೆ ನನ್ನ ಸಾಕ್ಲಿ, ಇಲ್ಲ ಅಂದ್ರೆ ಮಣ್ಣು ಹಾಕ್ಲಿ... ಹೀಗಂತ ಆಸ್ಪತ್ರೆ ಬೆಡ್ ಮೇಲೆ ಕಣ್ಣೀರು ಹಾಕ್ತಿರೋ ಇವರ ಹೆಸರು ಸಂಪತ್‌ಕುಮಾರ್. ವಯಸ್ಸು 60 ದಾಟಿದೆ. ಖಾಸಗಿ ಕಂಪೆನಿಯೊಂದರಲ್ಲಿ ಸೇಲ್ಸ್ ಅಂಡ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡ್ತಾ ಇದ್ದ ಸಂಪತ್‌ಗೆ ತಿಂಗಳ ಹಿಂದೊಮ್ಮೆ ಸ್ಟ್ರೋಕ್ ಹೊಡೆದು ಆಸ್ಪತ್ರೆ ಸೇರಿದ್ದರು. ಇದಾದ ಬಳಿಕ ನಿನ್ನೆ ಮತ್ತೆ ಸ್ಟ್ರೋಕ್ ಆಗಿ ಬೆಂಗಳೂರು ಉತ್ತರ ತಾಲ್ಲೂಕು ಮಾದನಾಯಕನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರನ್ನು ಆಸ್ಪತ್ರೆಗೆ ಸೇರಿಸಿರುವ ಶಿವಲಿಂಗಯ್ಯ ಎಂಬುವರು ಸಂಪತ್ ಕುಟುಂಬಸ್ಥರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದರು. ಆದ್ರೆ ಸಾಧ್ಯವಾಗಿಲ್ಲ. ಅಂದ ಹಾಗೆ ಸಂಪತ್ ಹೇಳುವ ಪ್ರಕಾರ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇವರ ಮಗಳಂತೆ.
ಇನ್ನೂ ಸುಮಾರು 20 ವರ್ಷಗಳಿಂದ ಅಪ್ಪ ಮತ್ತು ಮಕ್ಕಳ ನಡುವೆ ಸಂಪರ್ಕ ಇಲ್ವಂತೆ. ಮಗಳ ಇಮೇಜ್ ಡ್ಯಾಮೇಜ್ ಆಗಬಾರದು. ಕಷ್ಟ ಪಟ್ಟು ಮೇಲೆ ಬಂದಿದ್ದಾಳೆ. ಸಿಂಪತಿ ಗಿಟ್ಟಿಸಿಕೊಂಡು ಮುಂದೆ ಬಂದಿದ್ದಾಳೆ. ಚೆನ್ನಾಗಿರಲಿ ಅಂತ ನಾನು ಯಾರಿಗೂ ಡಿಸ್ಟರ್ಬ್ ಮಾಡ್ಲಿಲ್ಲ. ಇವರಿಗೋಸ್ಕರ ನನ್ನ ಇಡೀ ಜೀವನ ತ್ಯಾಗ ಮಾಡ್ಕೊಂಡೆ. ಮಗಳು ಇನ್ನೂ ಒಳ್ಳೆ ಲೆವೆಲ್‌ಗೆ ಬೆಳೆಯಲಿ, ನಾನು ಸತ್ರೆ ಮಣ್ಣಾಕಿ ಹೋಗ್ಲಿ, ನಾನು ಅವರಿಂದ ಏನೂ ನಿರೀಕ್ಷೆ ಮಾಡಲ್ಲ. ಅಪ್ಪ ಇದ್ದರೂ ಅಪ್ಪ ಇಲ್ಲ ಅಂದ್ರೆ ಏನು? ಮಕ್ಕಳು ಹಾಳಾಗ್ಲಿ ಅಂತ ಯಾವ ತಂದೆನೂ ಬಯಸಲ್ಲ. ಸಾಕೋದಾದ್ರೆ ನನ್ನ ಸಾಕಲಿ ಇಲ್ಲ ಮಣ್ಣಾಕ್ಲಿ ಅಂದ್ರು.
ಅಲ್ಲದೇ ಆರ್ಥಿಕವಾಗಿ ತೊಂದ್ರೆಯಲ್ಲಿದ್ದ ಸಂಪತ್, ಶಿವಲಿಂಗಯ್ಯ ಅನ್ನೋವ್ರ ಬಳಿ ಸೇಲ್ಸ್ ವಿಭಾಗಕ್ಕೆ ಕೆಲಸಕ್ಕೆ ಸೇರಿಕೊಂಡಿದ್ರು. ಇದೀಗ ಸ್ಟ್ರೋಕ್ ಹೊಡೆದು ಗಂಭೀರ ಸ್ಥಿತಿಯಲ್ಲಿರುವ ಸಂಪತ್‌ಗೆ ಕುಟುಂಬಸ್ಥರ ಆರೈಕೆ ಬೇಕಿದೆ. ಆದ್ರೆ ಅವರನ್ನ ನೋಡಿಕೊಳ್ಳಲು ಕುಟುಂಬಸ್ಥರೂ ಯಾರೂ ಸಹ ಬರ್ತಾ ಇಲ್ಲ. ಹೀಗಾಗಿ ಸಂಪತ್ ಅವರನ್ನು ಆಸ್ಪತ್ರೆಗೆ ಸೇರಿಸಿರೋ ಶಿವಲಿಂಗಯ್ಯ ಸದ್ಯ ಪೀಣ್ಯ ಪೊಲೀಸ್ ಠಾಣೆಗೂ ಸಹ ದೂರು ನೀಡಿದ್ದಾರೆ.
ಒಟ್ಟಾರೆ ಅಪ್ಪ ಮಕ್ಕಳ ನಡುವೆ ಏನೇ ಗಲಾಟೆ ಇರಲಿ. ಆದ್ರೆ ಸಾವಿನ ಕೊನೆಯ ಕ್ಷಣಗಳಲ್ಲಿ ಪೋಷಕರು, ತಮ್ಮ ಮಕ್ಕಳು ಜೊತೆಗಿರಬೇಕು ಅಂತ ಆಸೆ ಪಡೋದು ಸಹಜ. ಅಪ್ಪನ ಆಸೆಯನ್ನು ಖ್ಯಾತ ನಿರೂಪಕಿ ಈಡೇರಿಸ್ತಾರಾ ಇಲ್ವಾ? ಅನ್ನೋದು ಗೊತ್ತಿಲ್ಲ.. ಆದ್ರೆ ಮಕ್ಕಳನ್ನು ನೋಡ್ಬೇಕು ಅಂತ ತಂದೆ ಸಂಪತ್ ಕಣ್ಣೀರಿಡುತ್ತಾ ಮಕ್ಕಳಿಗಾಗಿ ಹೃದಯ ಮಿಡಿಯುತ್ತಿರೋದಂತೂ ಸತ್ಯ.
PublicNext
31/03/2022 08:41 pm