ನೆಲಮಂಗಲ: ಆಕೆ ಕೂಡ ಇತರ ಯುವತಿಯರಂತೆ ನೂರಾರು ಕನಸು ಕಟ್ಕೊಂಡು ಪತಿಯೊಂದಿಗೆ ದಾಂಪತ್ಯ ಜೀವನ ಶುರು ಮಾಡಿದ್ಲು. ಆದ್ರೆ, ಆಕೆಯ ಪತಿರಾಯ ಬಾಳಲ್ಲಿ ಒಂದು ದಿನವೂ ನೆಮ್ಮದಿಯ ಜೀವನ ಕೊಡಲೇ ಇಲ್ಲ! ಗಂಡನೊಂದಿಗೆ ನೊಂದು, ಬೆಂದು ಬೇಸತ್ತಿದ್ದ ಪತ್ನಿ ಇಂದು ಅದೇ ಪತಿಯ ಕೈಯಿಂದಲೇ ಕೊಲೆಯಾಗಿ ಹೋಗಿದ್ದಾಳೆ!
ಅಯ್ಯೋ... ನನ್ನ ಮಗಳನ್ನ ಕೊಂದ್ಬಿಟ್ರು ಅಂತಾ ಹೆತ್ತವರ ಆಕ್ರಂದನ. ಬೆಡ್ ಮೇಲೆ ಹೆಣವಾಗಿ ಮಲಗಿರೋ ಮಗಳು, ಶವ ಹೊತ್ತ ಆಂಬ್ಯುಲೆನ್ಸ್‌ಗೆ ಅಡ್ಡ ನಿಂತು ಪ್ರತಿಭಟನೆ, ನ್ಯಾಯಕ್ಕಾಗಿ ಪೊಲೀಸರ ಕಾಲು ಹಿಡಿದ ಹೆತ್ತವರು. ಮತ್ತೊಂದೆಡೆ ಪೊಲೀಸ್ರೊಂದಿಗೆ ವಾಗ್ವಾದ, ಈ ಗೋಳಾಟ- ಆಕ್ರೋಶದ ದೃಶ್ಯ ಕಂಡು ಬಂದಿದ್ದು, ನೆಲಮಂಗಲ ತಾಲ್ಲೂಕು ದಾಬಸ್‌ಪೇಟೆ ಠಾಣೆ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ.
ದಾಬಸ್ ಪೇಟೆ ಟೌನಿನ ಅನ್ನಪೂರ್ಣೇಶ್ವರಿ ಬಡಾವಣೆ ನಿವಾಸಿ ನಿವೃತ್ತ ಎಎಸ್‌ಐ ಪುಟ್ಟರುದ್ರಪ್ಪ ಮಗ ರಾಮು @ ಶಶಿಧರ್ ತನ್ನ ಪತ್ನಿ 25 ವರ್ಷದ ವನಿತಾಳನ್ನ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಕಳೆದ ವರ್ಷ ಮೇ 1ರಂದು ತುಮಕೂರು ಜಿಲ್ಲೆ ಚೇಳೂರು ತಾಲೂಕು ನಂದಿಹಳ್ಳಿ ಮೂಲದ ಪುಟ್ಟಸಿದ್ದಪ್ಪ ಮಗಳು ವನಿತಾಳನ್ನ ಆರೋಪಿ ರಾಮುಗೆ ಅದ್ಧೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದರು.
ಆದ್ರೆ, ಮದುವೆ ಬಳಿಕ ರಾಮು ಒಂದು ದಿನವೂ ಕೆಲಸಕ್ಕೆ ಹೋಗ್ಲಿಲ್ವಂತೆ. ಮದುವೆಯಾದ 6 ತಿಂಗಳು ತವರು ಮನೆಯಲ್ಲೇ ವನಿತಾ ಇದ್ದು, ಮದುವೆಯಾದ ಮೊದಲ ದಿನದಿಂದ್ಲೂ ಇಬ್ಬರಿಗೂ ಹೊಂದಾಣಿಕೆಯೇ ಇರಲಿಲ್ಲವಂತೆ! 2-3 ತಿಂಗಳ ಹಿಂದೆ ವನಿತಾ ಹಾಗೂ ರಾಮು ನಡುವೆ ಜಗಳವಾಗಿದ್ದು, ವನಿತಾ ಮತ್ತೆ ತವರು ಮನೆಗೆ ಹೋಗಿದ್ದರು.
ಆಗ ಆರೋಪಿ ರಾಮು, ವನಿತಾ ಮನೆಗೆ ಹೋಗಿ, ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿಸಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ನಂತ್ರ ನೆನ್ನೆ ರಾತ್ರಿ ನಡೆದ ಜಗಳದಲ್ಲಿ ವನಿತಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ತಾನೇ ಕೊಲೆ ಮಾಡಿರೋದಾಗಿ ದಾಬಸ್‌ಪೇಟೆ ಠಾಣೆ ಪೊಲೀಸ್ರಿಗೆ ಪಾತಕಿ ಪತಿ ಶರಣಾಗಿದ್ದಾನೆ.
ಬೆಂ.ಗ್ರಾ. ಎಸ್ಪಿ ಕೋನಾ ವಂಶಿಕೃಷ್ಣ, ತಹಶೀಲ್ದಾರ್ ಮಂಜುನಾಥ್ ಸಮಕ್ಷಮದಲ್ಲಿ ಸ್ಥಳ ಮಹಜರು ನಡೆಸಿ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರಾಮು ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಿಸಿದ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
ಇದೇ ವೇಳೆ ಮೃತಳ ಪೋಷಕರು, ಸಂಬಂಧಿಕರು ಮಗಳು ಸತ್ತ ಮನೆಯಲ್ಲೇ ಶವ ಸಂಸ್ಕಾರ ಮಾಡಲು ಅವಕಾಶ ಮಾಡಿ ಕೊಡಿ. ಅಲ್ಲದೆ, ರಾಮು ಮತ್ತವನ ಕುಟುಂಬಸ್ಥರೇ ಮಗಳ ಹತ್ಯೆಗೆ ಕಾರಣ. ಅವರನ್ನ ಬಂಧಿಸೋವರೆಗೂ ಶವ ಹೊತ್ತೊಯ್ಯಲು ಬಿಡುವುದಿಲ್ಲ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ರು.
PublicNext
06/05/2022 02:03 pm