ದೊಡ್ಡಬಳ್ಳಾಪುರ: ಗ್ರಾಮದಲ್ಲಿ ಲಂಬಾಣಿ ಕುಟುಂಬಗಳು ವಾಸವಾಗಿದ್ದು, ಗ್ರಾಮದ ಬಹುತೇಕ ಎಲ್ಲಾ ಅಂಗಡಿಯಲ್ಲೂ ಮದ್ಯ ಮಾರಾಟವಾಗುತ್ತಿದೆ! ಬಲು ಸುಲಭವಾಗಿ ಸಿಗುವ ಮದ್ಯ ಕುಡಿದು ಬಹುತೇಕ ಯುವಕರು ಸಾವನ್ನಪ್ಪಿದ್ದಾರೆ.
ಈ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳೆಯರು ಗೋಗರೆಯುತ್ತಿದ್ದಾರೆ. ಮಹಿಳೆಯರ ಮನವಿಗೆ ಸ್ಪಂದಿಸಿದ ಪೊಲೀಸರು ಗ್ರಾಮಸಭೆ ಮಾಡುವ ಮೂಲಕ ಅಕ್ರಮ ಮದ್ಯ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ತಾಂಡದಲ್ಲಿ ನೀರಿಗಿಂತ ಮದ್ಯವೇ ತುಂಬಾ ಸುಲಭವಾಗಿ ಸಿಗುತ್ತೆ. ಗ್ರಾಮದಲ್ಲಿ 8 ಚಿಲ್ಲರೆ ಅಂಗಡಿ ಇದ್ದು ಪ್ರತಿ ಅಂಗಡಿಯಲ್ಲೂ ಮದ್ಯ ಲಭ್ಯ. ಮನೆ ಹೊಸಿಲು ದಾಟಿ ನಾಲ್ಕೆಜ್ಜೆ ಹಾಕಿದ್ರೆ ಸಾಕು, ಎಣ್ಣೆ ಸಿಗುತ್ತೆ ಇಲ್ಲಿನ ಜನರಿಗೆ. ಮೀಸೆ ಮೂಡುವ ಮುನ್ನವೇ ತರುಣರು ಕುಡಿತದ ದಾಸರಾಗಿದ್ದಾರೆ!
ಕುಡಿತದಿಂದಾಗಿ ಇಲ್ಲಿನ ಬಹುತೇಕ ಸಂಸಾರ ಬೀದಿಗೆ ಬಂದಿವೆ. ನಿತ್ಯ ಮಹಿಳೆಯರು ಕಣ್ಣೀರು ಹಾಕೋದು ಮಾಮೂಲಾಗಿದೆ. ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳೆಯರು ಕೈ ಮುಗಿದು ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆಗೆ ಮೊರೆಯಿಡುತ್ತಿದ್ದಾರೆ.
ಹರೀಶ್ ನಾಯ್ಕ್ ಗ್ರಾಮದ ಪ್ರತಿಭಾವಂತ ಯುವಕ. ಹಾಡಿನ ಮೂಲಕ ಗ್ರಾಮಸ್ಥರ ಮನ ಗೆದ್ದಿದ್ದ. ಆದರೆ, ಆತನ ಕುಡಿತದ ಚಟ ಇವತ್ತು ಆತನ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಹರೀಶ್ ನಂತೆ ಬಹುತೇಕ ಯುವಕರೂ ಕುಡಿತದಿಂದ ಸಾಯುವ ಸ್ಥಿತಿಗೆ ಬಂದಿದ್ದಾರೆ. 8ಕ್ಕೂ ಹೆಚ್ಚು ಯುವಕರ ಲಿವರ್ ಫೈಲ್ಯೂರ್ ಆಗಿದೆ. ಕುಡಿದು ಬಂದು ಹೆಂಡತಿ- ಮಕ್ಕಳಿಗೆ ಹೊಡೆಯೋದು ಇಲ್ಲಿನ ಗಂಡಸರ ಹವ್ಯಾಸವೇ ಆಗಿ ಬಿಟ್ಟಿದೆ.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಹೊಸಹಳ್ಳಿ ಪೊಲೀಸರು ಗ್ರಾಮದಲ್ಲಿ ಸಭೆ ನಡೆಸಿದ್ದು, ಅಂಗಡಿ ಮಾಲೀಕರಿಗೆ ಮದ್ಯ ಮಾರಾಟ ಮಾಡದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಮದ್ಯ ಮಾರಿದರೆ ರೌಡಿಶೀಟರ್ ತೆಗೆಯುವುದಾಗಿ ವಾರ್ನಿಂಗ್ ಮಾಡಿದ್ದಾರೆ.
PublicNext
03/07/2022 05:13 pm