ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಲ್ಲಿ ಮಯೂರವರ್ಮನಾಗಿ ಡಾ.ರಾಜ್ ವಿರಾಜಮಾನ; ಕುರುಬರಹಳ್ಳಿ ಕನ್ನಡಮ್ಮನ ನಿತ್ಯೋತ್ಸವ ತಾಣ!

ಬೆಂಗಳೂರು: ಕನ್ನಡದ ವರನಟ, ಕರ್ನಾಟಕ ರತ್ನ,‌ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ರಾಜ್ ಕುಮಾರ್ ಅವರ ಜಯಂತ್ಯುತ್ಸವವನ್ನು ಇಡೀ ಕನ್ನಡನಾಡು ಅದ್ಧೂರಿಯಿಂದ ಆಚರಿಸುತ್ತಿದೆ. ಡಾ.ರಾಜ್ ಕುಮಾರ್ ಹೆಸರು ಕರ್ನಾಟಕದ ಇತಿಹಾಸದಲ್ಲಿ ಅಜರಾಮರ. ʼಅಭಿಮಾನಿಗಳನ್ನೇ ದೇವರುʼ ಎಂದು ಕರೆದ ಅಣ್ಣಾವ್ರು, ಎಲ್ಲರನ್ನೂ ಪ್ರೀತಿಯಿಂದ ಕಂಡು ಆದರಿಸಿದ ಸರಳತೆ ಸಜ್ಜನತೆಯ ಸಾಕಾರಮೂರ್ತಿ.

ತಮ್ಮ ಆದರ್ಶಗಳ ಮೂಲಕ ದೇವತಾ ಮನುಷ್ಯ, ಬಂಗಾರದ ಮನುಷ್ಯ ಅನ್ನಿಸಿಕೊಂಡವರು. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ನಾಡಿನ ಎಷ್ಟೋ ರಸ್ತೆಗಳಿಗೆ, ಸರ್ಕಲ್ ಗಳಿಗೆ, ಕಲಾಸೌಧಗಳಿಗೆ ಇಡಲಾಗಿದೆ. ಅದೆಷ್ಟೋ ಸಂಸ್ಥೆಗಳು ಅಣ್ಣಾವ್ರ ಹೆಸರನ್ನಿಟ್ಟುಕೊಂಡು ಕನ್ನಡದ ಸೇವೆಯಲ್ಲಿ ತೊಡಗಿವೆ. ಡಾ.ರಾಜ್ ಪುತ್ಥಳಿಗಳೂ ಕರುನಾಡ ತುಂಬೆಲ್ಲ ಸಹಸ್ರ ಸಂಖ್ಯೆಯಲ್ಲಿ ರಾರಾಜಿಸುತ್ತಿವೆ.

ಅವುಗಳಲ್ಲೆಲ್ಲ ಅತಿ ಉತ್ಕೃಷ್ಟ, ವಿಶಿಷ್ಟವೂ ಆದ ಪುತ್ಥಳಿ ಬೆಂಗಳೂರು ಮಹಾನಗರದ ಕುರುಬರಹಳ್ಳಿ ಸರ್ಕಲ್ ನಲ್ಲಿ ಕಂಗೊಳಿಸುತ್ತಿದೆ. ಚಾಲುಕ್ಯ ಡಾ.ರಾಜ್ ಕುಮಾರ್ ಟ್ರಸ್ಟ್ ಪ್ರತಿಷ್ಠಾಪಿಸಿದ ಈ ಪ್ರತಿಮೆ ಅಪೂರ್ವವಾಗಿ ರೂಪುಗೊಂಡಿದೆ. 2007ರಲ್ಲೇ ಪ್ರತಿಮೆ ನಿರ್ಮಾಣ ಆರಂಭಗೊಂಡು 2013ರಲ್ಲಿ ಮುಕ್ತಾಯವಾಗಿ 2014ರಲ್ಲಿ ಪ್ರತಿಷ್ಠಾಪಿಸಲಾಗಿತ್ತು.

ನವಿರಾದ ಕುಸುರಿ ಕೆಲಸದಿಂದ ನಿರ್ಮಿತವಾದ ಹಂಪಿಯ ಕಲ್ಲಿನ ರಥದ ಮೇಲೆ ಅದ್ಭುತ ಎನ್ನಿಸುವ ಭಂಗಿಯಲ್ಲಿ ಕನ್ನಡದ ಪ್ರಥಮ ದೊರೆ ಮಯೂರವರ್ಮನ ಠೀವಿಯಲ್ಲಿ ನಿಂತ ಭಂಗಿಯ ಡಾ.ರಾಜ್ ಕುಮಾರ್ ಪುತ್ಥಳಿ ಎಲ್ಲರನ್ನೂ ಸೆಳೆಯುತ್ತಿದೆ. ಕನ್ನಡದ ಗಟ್ಟಿನೆಲೆಯಾಗಿದ್ದ ಕುರುಬರ ಹಳ್ಳಿ ಇದೀಗ ಒಂದು ಪುಣ್ಯಕ್ಷೇತ್ರದಂತೆ ಬಿಂಬಿತವಾಗಿದೆ. ರಥಾರೂಢ ಡಾ.ರಾಜ್ ಪ್ರತಿಮೆ‌ ಅಡಿಯಲ್ಲಿ ಚಾಲುಕ್ಯ ಡಾ.ರಾಜ್ ಕುಮಾರ್ ಟ್ರಸ್ಟ್ ನವರು ನಿತ್ಯ ನಿರಂತರ ಕಾರ್ಯಕ್ರಮ ನಡೆಸುತ್ತಾ ಬರುತ್ತಿದ್ದಾರೆ.

ಪ್ರತೀ 2 ವರ್ಷಗಳಿಗೊಮ್ಮೆ ನಡೆಯುವ ʼರಾಜ್ ರಥೋತ್ಸವʼ ಇಡೀ ರಾಜ್ಯದಲ್ಲೇ ಅತ್ಯಂತ ಅದ್ಧೂರಿ ವೈಭವದ ಉತ್ಸವ ಎಂದು ಹೆಸರಾಗಿದೆ. ಡಾ.ರಾಜ್ ಅವರ ಪುತ್ರತ್ರಯರೆಲ್ಲರೂ ಭಾಗಿಯಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲ ಕಲಾವಿದರನ್ನೂ ಕರೆಸಿ ಗೌರವಿಸುವ ಕಾರ್ಯಕ್ರಮ ನಡೆಯುತ್ತಲೇ ಇದೆ.

ಡಾ.ರಾಜ್ ಕುಮಾರ್ ಜಯಂತಿ, ಕನ್ನಡ ರಾಜ್ಯೋತ್ಸವ, ಪುನೀತ್ ರಾಜ್ ಕುಮಾರ್ ಜನ್ಮದಿನ‌ ಹಾಗೂ ಎಲ್ಲ ರಾಷ್ಟ್ರೀಯ ಹಬ್ಬದಂದು ವಿಶೇಷ ಕಾರ್ಯಕ್ರಮ ಸಹಿತ ಪಾನಕ- ಮಜ್ಜಿಗೆ ವಿತರಣೆ, ಅನ್ನದಾನ, ಸಂಜೆ ಡಾ.ರಾಜ್ ಅವರ ಸಿನಿಮಾ ಪ್ರದರ್ಶನ ನಡೆದು ಬರುತ್ತಿದೆ. ಉಚಿತ ಆರೋಗ್ಯ ಶಿಬಿರ, ನಗರ ದೇವತೆ ಶ್ರೀ ಅಣ್ಣಮ್ಮ ದೇವಿ ಉತ್ಸವ ಸೇರಿದಂತೆ ಕನ್ನಡದ ನಿತ್ಯೋತ್ಸವ ನಡೆಯುವ ತಾಣವೆಂದರೆ ಅದು ಕುರುಬರಹಳ್ಳಿಯ ಡಾ.ರಾಜ್ ಕುಮಾರ್ ಕ್ಷೇತ್ರ!

- ಪ್ರವೀಣ್ ರಾವ್, ಬೆಂಗಳೂರು

Edited By : Manjunath H D
PublicNext

PublicNext

24/04/2022 09:10 pm

Cinque Terre

44.01 K

Cinque Terre

0

ಸಂಬಂಧಿತ ಸುದ್ದಿ